newsics.com
ವಿಂಗ್ ಕಮಾಂಡರ್ ಬೋಸ್ ಹಲ್ಲೆಗೊಳಗಾಗಿ ಹಂಚಿಕೊಂಡ ವಿಡಿಯೊ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಪತ್ನಿ ಜತೆ ಏರ್ಪೋರ್ಟ್ನಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಅವರ ಮೇಲೆ ಬೈಕ್ನಲ್ಲಿ ಬಂದ ಯುವಕರು ಹಲ್ಲೆ ಮಾಡಿದರು ಎಂದು ಆರೋಪ ಕೇಳಿಬಂದಿತ್ತು.
ವಿಡಿಯೊದಲ್ಲಿ ಮಾತನಾಡಿದ್ದ ಬೋಸ್ ʼನಿಮ್ಮ ಕಾರ್ನಲ್ಲಿ ಡಿಆರ್ಡಿಒ ಸ್ಟಿಕ್ಕರ್ ಇದೆ ನೀವು ಡಿಆರ್ಡಿಒನವರಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಹೌದು, ಎನ್ನುತ್ತಿದ್ದಂತೆ ಏಕಾಏಕಿ ತನ್ನನ್ನು ಹಾಗೂ ತನ್ನ ಪತ್ನಿಯನ್ನು ನಿಂದಿಸಲು ಆರಂಭಿಸಿದರು. ಬಳಿಕ ಓರ್ವ ಬೈಕ್ ಕೀನಿಂದ ನನ್ನ ಹಣೆಗೆ ಹೊಡೆದ, ಕಾರಿಗೆ ಕಲ್ಲು ಎತ್ತಿ ಹಾಕಲು ಯತ್ನಿಸಿದರು, ತಡೆಯಲು ಪ್ರಯತ್ನಿಸಿದಾಗ ತಲೆಯ ಹಿಂಭಾಗಕ್ಕೆ ಕಲ್ಲಿನಿಂದ ಹೊಡೆದರು ಎಂದು ಆರೋಪ ಮಾಡಿದ್ದರು. ಅಲ್ಲದೇ ವಿಡಿಯೊದಲ್ಲಿ ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ, ಯೋಧ ಎಂದರೂ ಸಹ ಹಲ್ಲೆ ಮಾಡಿದರು ಎಂಬ ಗಂಭೀರ ಆರೋಪಗಳನ್ನು ಮಾಡಿದ್ದರು. ಹೀಗೆ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಾವು ಕಲೆಹಾಕಿದ ಮಾಹಿತಿ ಪ್ರಕಾರ ಇದು ಪೂರ್ವ ನಿಯೋಜಿತ ಹಲ್ಲೆಯಲ್ಲ, ಬದಲಾಗಿ ರಸ್ತೆ ಜಗಳ ಎಂದಿದ್ದಾರೆ.
ಹೌದು, ಪೂರ್ವ ಬೆಂಗಳೂರು ವಿಭಾಗದ ಡಿಸಿಪಿ ಡಿ ದೇವರಾಜು ಅವರು ಈ ಕುರಿತು ಮಾತನಾಡಿದ್ದು ಇದು ಭಾಷೆ ವಿಚಾರವಾಗಿಯೋ ಅಥವಾ ಧರ್ಮದ ವಿಚಾರವಾಗಿಯೋ ನಡೆದ ಘಟನೆಯಲ್ಲ, ಬೆಂಗಳೂರಿನಲ್ಲಿ ದೈನಂದಿನ ನಡೆಯುವ ರೋಡ್ ರೇಜ್ ಜಗಳಗಳ ಹಾಗೆ ಇದೂ ಸಹ ಇನ್ನೊಂದು ಪ್ರಕರಣ ಎಂದಿದ್ದಾರೆ. ಎಲ್ಲ ಪಕ್ಕಾ ಮಾಹಿತಿಗಳನ್ನು ಕಲೆಹಾಕಿ ಪರಿಶೀಲಿಸಿದ ಬಳಿಕ ಈ ಸತ್ಯಾಂಶ ಹೊರಬಂದಿದೆ ಎಂದಿದ್ದಾರೆ. ಅಲ್ಲದೇ ಘಟನೆಯ ಸಂದರ್ಭದಲ್ಲಿ ಯುವಕರ ಗುಂಪು ಜಗಳದಲ್ಲಿ ನಿರತರಾಗಿದ್ದ ಇಬ್ಬರನ್ನು ಬೇರ್ಪಡಿಸಲು ಯತ್ನಿಸಿದ್ದರೂ ಜಗಳ ನಡೆದಿದೆ ಎಂದೂ ಸಹ ತಿಳಿಸಿದ್ದಾರೆ.
ಪೊಲೀಸರ ಈ ಹೇಳಿಕೆ ಬೋಸ್ ಹೆಣೆದ ಸುಳ್ಳಿನ ಕಥೆಯನ್ನು ಬಿಚ್ಚಿಟ್ಟಿದೆ. ವಿಡಿಯೊದಲ್ಲಿ ಬೋಸ್ ಡಿಆರ್ಡಿಒ ಸ್ಟಿಕ್ಕರ್ ನೋಡಿ ಹಲ್ಲೆ ಮಾಡಿದ್ದರು ಎಂದಿದ್ದರು. ಆದರೆ ರಸ್ತೆ ಸಂಚಾರದ ವೇಳೆ ಆದ ಜಗಳಕ್ಕೆ ಸುಳ್ಳು ಕಥೆ ಕಟ್ಟಿ ಬೆಂಗಳೂರು ಹೆಸರನ್ನೇಕೆ ಎಳೆದುತಂದದ್ದೇಕೆ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ನೆರೆದಿದ್ದ ಜನರೂ ಸಹ ತನ್ನ ಮೇಲೆ ಹಲ್ಲೆ ಮಾಡಲು ಬಂದರು ಎಂದು ಆರೋಪಿಸಿದ್ದರು. ಇತ್ತ ಪೊಲೀಸರು ನೋಡಿದರೆ ನೆರೆದಿದ್ದ ಜನರು ಜಗಳ ಬಿಡಿಸಲು ಬಂದರೂ ಅದನ್ನು ಕೇಳದೇ ಜಗಳ ಮುಂದುವರಿಸಿದ್ದಾರೆ ಎಂದಿದ್ದಾರೆ.
ಹೀಗೆ ಪೊಲೀಸರ ಹೇಳಿಕೆಗೂ ಯೋಧ ಬೋಸ್ ವಿಡಿಯೊದಲ್ಲಿನ ಹೇಳಿಕೆಗಳನ್ನು ತಾಳೆ ಮಾಡಿ ನೋಡಿದರೆ ಸಾಕಷ್ಟು ವ್ಯತ್ಯಾಸಗಳಿದ್ದು, ಬೋಸ್ ಇಷ್ಟು ಸುಳ್ಳು ಕಥೆ ಕಟ್ಟಿ ವಿಡಿಯೊ ಮಾಡಿದ್ದು ದಿನ ಕಳೆಯುವಷ್ಟರಲ್ಲಿ ಬಯಲಾಗಿದೆ.