newsics.com / ನ್ಯೂಸಿಕ್ಸ್
ಡೆಹ್ರಾಡೂನ್: ನೀಟ್ ಮರು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿಯೊಬ್ಬಳು ತನ್ನ ಮನೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆಯೊಂದು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ.
1999ರ ಕಾರ್ಗಿಲ್ ಯುದ್ಧದ ನಿವೃತ್ತ ಯೋಧರ ಪುತ್ರಿ ರಿಯಾ ಕುಮಾರಿ ಥಾಪಾ (23) ಆತ್ಮ*ಹತ್ಯೆಗೆ ಶರಣಾದವಳು.
ರಿಯಾಳ ತಾಯಿ ನಿನ್ನೆ (ಜೂ.16) ಮಧ್ಯಾಹ್ನ ಮಗಳನ್ನು ಊಟಕ್ಕೆ ಕರೆಯಲು ಆಕೆಯ ಕೋಣೆಯ ಬಳಿ ಹೋಗಿ ಕರೆದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಇದರಿಂದ ಅನುಮಾನಗೊಂಡು ಪತಿಗೆ ವಿಷಯ ತಿಳಿಸಿದ್ದಾರೆ ಬಳಿಕ ಬಾಗಿಲನ್ನು ಮುರಿದು ಒಳಹೋದಾಗ, ರಿಯಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಆಕೆಯ ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ “ಐ ಲವ್ ಯೂ, ಮಮ್ಮಿ, ಪಾಪ. ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ” ಎಂದು ಬರೆದಿದ್ದಾಳೆ ಎನ್ನಲಾಗಿದೆ.
ರಿಯಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 97 ರಷ್ಟು ಅಂಕಗಳನ್ನು ಗಳಿಸಿ ತನ್ನ ಶಾಲೆಯ ಟಾಪರ್ ಆಗಿದ್ದಳು. ಆದರೆ, ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್’ (NEET-UG) ಅನ್ನು ಮೊದಲ ಬಾರಿಗೆ ಎದುರಿಸಿದಾಗ ಆಕೆಗೆ ಯಶಸ್ಸು ಸಿಕ್ಕಿರಲಿಲ್ಲ ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಅದರಂತೆ ಜೂನ್ 21 ರಂದು ನಡೆಯಲಿರುವ ನೀಟ್ ಮರುಪರೀಕ್ಷೆಗೆ ಆಕೆ ತೀವ್ರವಾಗಿ ಸಿದ್ಧತೆ ನಡೆಸುತ್ತಿದ್ದಳು ಎಂದು ಪೋಷಕರು ಮಾಹಿತಿ ನೀಡಿದ್ದಾರೆ.