newsics.com/ನ್ಯೂಸಿಕ್ಸ್
ಅಮೆರಿಕ ಮೂಲದ ಸ್ಟಾರ್ಟ್‌ಅಪ್ ಕಂಪನಿಯೊಂದರ ಸಿಇಒ ತನ್ನ ಉದ್ಯೋಗಿಗಳ ಉತ್ಪಾದಕತೆಯನ್ನು (Productivity) ಹೆಚ್ಚಿಸಲು ಸಂಪೂರ್ಣವಾಗಿ ವಿಭಿನ್ನವಾದ ಹಾದಿ ಹಿಡಿದಿದ್ದಾರೆ.
ಫ್ಯಾಕ್ಟರಿ ಎಂಬ ಎಐ ಸ್ಟಾರ್ಟ್‌ಅಪ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತನ್ ಗ್ರೀನ್‌ಬರ್ಗ್, ತಮ್ಮ ಕಂಪನಿಯ ಉದ್ಯೋಗಿಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಪ್ರೀಮಿಯಂ ಹಾಸಿಗೆಗಳನ್ನು (Mattresses) ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಉದ್ಯೋಗಿಗಳು ಪ್ರತಿದಿನ ಕಚೇರಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಅವರು ರಾತ್ರಿ ಸರಿಯಾಗಿ ನಿದ್ದೆ ಮಾಡುವುದು ಅತ್ಯಗತ್ಯ ಎಂಬುದು ಗ್ರೀನ್‌ಬರ್ಗ್ ಅವರ ವಾದ. “ನಮ್ಮ ಇಂಜಿನಿಯರ್‌ಗಳು ತಮ್ಮ ಸಂಪೂರ್ಣ ಮೆದುಳಿನ ಸಾಮರ್ಥ್ಯವನ್ನು ಬಳಸಿಕೊಂಡು ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ. ಅದಕ್ಕೆ ಉತ್ತಮ ನಿದ್ದೆ ಬಹಳ ಮುಖ್ಯ,” ಎಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಎನ್‌ಬಿಎ (NBA) ಬ್ಯಾಸ್ಕೆಟ್‌ಬಾಲ್‌ನಂತಹ ಕ್ರೀಡೆಗಳಲ್ಲಿ ಉನ್ನತ ಮಟ್ಟದ ಪ್ರದರ್ಶನ ನೀಡಲು ಕ್ರೀಡಾಪಟುಗಳಿಗೆ ವಿಶ್ರಾಂತಿ ಎಷ್ಟು ಮುಖ್ಯವೋ, ಅದೇ ರೀತಿ ತಮ್ಮ ಉದ್ಯೋಗಿಗಳಿಗೂ ವಿಶ್ರಾಂತಿ ಅಷ್ಟೇ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಕಂಪನಿಯಲ್ಲಿ ಕೇವಲ 30 ಉದ್ಯೋಗಿಗಳಿದ್ದಾಗ, ಗ್ರೀನ್‌ಬರ್ಗ್ ಅವರು ಪ್ರತಿ ಉದ್ಯೋಗಿಗೆ ಸುಮಾರು 3,000 ಡಾಲರ್ (ಅಂದಾಜು 2.83 ಲಕ್ಷ ರೂಪಾಯಿ) ಮೌಲ್ಯದ ‘ಎಯ್ಟ್ ಸ್ಲೀಪ್’ (Eight Sleep) ಹೈಟೆಕ್ ಹಾಸಿಗೆ ಕವರ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಶೇಷ ಹಾಸಿಗೆಗಳು ಆಂತರಿಕ ದ್ರವದ (Liquid) ಸಹಾಯದಿಂದ ಹಾಸಿಗೆಯ ತಾಪಮಾನವನ್ನು (Temperature) ನಿಯಂತ್ರಿಸುತ್ತವೆ. ಅಷ್ಟೇ ಅಲ್ಲದೆ, ಇತ್ತೀಚಿನ ಮಾಡೆಲ್‌ಗಳು ಹಾಸಿಗೆಯ ಎತ್ತರವನ್ನು ಸ್ವಯಂಚಾಲಿತವಾಗಿ ಹೆಚ್ಚು-ಕಡಿಮೆ ಮಾಡುವ ತಂತ್ರಜ್ಞಾನವನ್ನೂ ಹೊಂದಿವೆ.
ನಾವು ಕೇವಲ ಕೆಲಸದ ಔಟ್‌ಪುಟ್ ಅನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮ ಉದ್ಯೋಗಿಗಳನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ನಮ್ಮ ಮಹತ್ವಾಕಾಂಕ್ಷೆಯ ಗುರಿಗಳನ್ನು ತಲುಪಲು ಮತ್ತು ಉದ್ಯೋಗಿಗಳ ಉತ್ಪಾದಕತೆ ಹೆಚ್ಚಿಸಲು ಎಷ್ಟು ಹಣ ಖರ್ಚು ಮಾಡಿದರೂ ತಪ್ಪಿಲ್ಲ,” ಎಂದು ಗ್ರೀನ್‌ಬರ್ಗ್ ಹೇಳಿದ್ದಾರೆ.
ಕೇವಲ ನಿದ್ದೆ ಮಾತ್ರವಲ್ಲದೆ, ಉದ್ಯೋಗಿಗಳ ಆರೋಗ್ಯ ಮತ್ತು ಏಕಾಗ್ರತೆಯ ಕಡೆಗೂ ಈ ಸಿಇಒ ವಿಶೇಷ ಗಮನ ಹರಿಸಿದ್ದಾರೆ. ಕಚೇರಿಯಲ್ಲಿ ಸಂಸ್ಕರಿಸಿದ ಸಕ್ಕರೆ (Processed Sugar) ಬಳಕೆಯನ್ನು ಅವರು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ಸಕ್ಕರೆಯು ಉದ್ಯೋಗಿಗಳ ಗಮನವನ್ನು ಕೆಡಿಸುತ್ತದೆ ಎಂದು ನಂಬಿರುವ ಅವರು, ಕಚೇರಿಯಲ್ಲಿ ಪ್ರೋಟೀನ್ ಚಿಪ್ಸ್ ಮತ್ತು ಕ್ಯಾನ್ಡ್ ಮಚ್ಚಾದಂತಹ ದುಬಾರಿ ಹಾಗೂ ಆರೋಗ್ಯಕರ ಸ್ನಾಕ್ಸ್ ಪ್ರಿಫರ್ ಮಾಡುತ್ತಿದ್ದಾರೆ.
2010ರ ದಶಕದ ಟೆಕ್ ಕಂಪನಿಗಳಂತೆ ಕಚೇರಿಯಲ್ಲಿ ಕೇವಲ ಮೋಜು-ಮಸ್ತಿಯ ವಾತಾವರಣ ಸೃಷ್ಟಿಸುವುದು ನನ್ನ ಉದ್ದೇಶವಲ್ಲ, ಬದಲಿಗೆ ಕೆಲಸಕ್ಕೆ ಪೂರಕವಾದ ಆರೋಗ್ಯಕರ ವಾತಾವರಣ ನಿರ್ಮಿಸುವುದು ನನ್ನ ಗುರಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2023 ರಲ್ಲಿ ಪ್ರಾರಂಭವಾದ ‘ಫ್ಯಾಕ್ಟರಿ’ ಎಐ ಸ್ಟಾರ್ಟ್‌ಅಪ್ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಸದ್ಯ 120 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕಳೆದ ಏಪ್ರಿಲ್‌ನಲ್ಲಿ ಈ ಕಂಪನಿಯು ಸಿಕ್ವೊಯಾ ಕ್ಯಾಪಿಟಲ್ ಮತ್ತು ಬ್ಲ್ಯಾಕ್‌ಸ್ಟೋನ್‌ನಂತಹ ಪ್ರಮುಖ ಹೂಡಿಕೆದಾರರಿಂದ 150 ಮಿಲಿಯನ್ ಡಾಲರ್ ಧನಸಹಾಯವನ್ನು (Funding) ಪಡೆದುಕೊಂಡಿದೆ. ಸದ್ಯ ಹೊಸದಾಗಿ ಸೇರಿದ ಉದ್ಯೋಗಿಗಳಿಗೆ ಈ ಹಾಸಿಗೆಯನ್ನು ನೀಡಿಲ್ಲವಾದರೂ, ಮುಂದಿನ ದಿನಗಳಲ್ಲಿ ಇದನ್ನು ಎಲ್ಲರಿಗೂ ಕಡ್ಡಾಯವಾಗಿ ನೀಡಲು ಅಥವಾ ಆರೋಗ್ಯ ಭತ್ಯೆಯಾಗಿ ಪರಿವರ್ತಿಸಲು ಸಿಇಒ ಯೋಚಿಸುತ್ತಿದ್ದಾರೆ.