newsics.com
ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಬಗೆದಷ್ಟೂ ಸ್ಫೋಟಕ ಮಾಹಿತಿ ಬಯಲಾಗುತ್ತಲೇ ಇದ್ದು, ರನ್ಯಾ ಪತಿ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಅಲ್ಲದೇ ಈ ಕೃತ್ಯದ ಹಿಂದೆ ಬಹುದೊಡ್ಡ ಜಾಲವೇ ಇರುವ ಅನುಮಾನ ಮೂಡಿದ್ದು, ರನ್ಯಾರಾವ್ ಇಲ್ಲಿ ನೆಪಮಾತ್ರವಾಗಿದ್ದಾರಾ ಎಂಬ ಸಂಶಯದಿಂದಲೇ ತನಿಖೆ ಮುಂದುವರಿಸಲಾಗುತ್ತಿದೆ.
ಈ ಬಗ್ಗೆ ರನ್ಯಾರಾವ್ ಪತಿ ಜತಿನ್ ಹುಕ್ಕೇರಿ ಅವರ ವಿಚಾರಣೆಗೂ ಡಿಆರ್‌ಐ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಜತಿನ್ ಅವರು ರನ್ಯಾ ಜತೆಗೆ ಹಲವು ಬಾರಿ ದುಬೈಗೆ ತೆರಳಿರುವುದರ ಬಗ್ಗೆ ಸಾಕ್ಷ್ಯ ಕಲೆ ಹಾಕಿಕೊಂಡಿದ್ದಾರೆ.
4 ತಿಂಗಳ ಹಿಂದಷ್ಟೇ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ರನ್ಯಾ ಮತ್ತು ಜತಿನ್ ವಿವಾಹವಾಗಿತ್ತು. ಬೆಂಗಳೂರು ಮೂಲದ ಜತಿನ್ ವೃತ್ತಿಯಲ್ಲಿ ವಾಸ್ತುಶಿಲ್ಪಿಯಾಗಿದ್ದು, ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ವಾಸ್ತುಶಿಲ್ಪ ಮತ್ತು ಒಳಾಂಗಣ ವಿನ್ಯಾಸದಲ್ಲಿ ಪದವಿ ಪಡೆದಿದ್ದಾರೆ. ನವೀನ ವಿನ್ಯಾಸಗಳ ಮೂಲಕ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದರು. ವಿಚಾರಣೆ ವೇಳೆ ತಾನು ಇದೇ ಮೊದಲ ಬಾರಿಗೆ ಚಿನ್ನವನ್ನು ತಂದಿದ್ದಾಗಿ ರನ್ಯಾ ವಿಚಾರಣಾ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ.
ಅಲ್ಲದೆ ತನ್ನನ್ನು ಬೆದರಿಸಿ ಈ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಸಹ ನಟಿ ಹೇಳಿದ್ದಾರೆ ಎನ್ನಲಾಗಿದೆ.
ರನ್ಯಾ ಯಾರಿಂದ ಚಿನ್ನ ಪಡೆದುಕೊಂಡು ಇಲ್ಲಿಗೆ ತರುತ್ತಿದ್ದರು? ರನ್ಯಾ ತಂದ ಚಿನ್ನವನ್ನು ಇಲ್ಲಿ ಯಾರು ಪಡೆದುಕೊಳ್ಳುತ್ತಿದ್ದರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಮೂರು ದಿನಗಳ ಕಸ್ಟಡಿಗೆ ಮನವಿ:
ರನ್ಯಾರಾವ್ ಅವರ ಚಿನ್ನ ಅಕ್ರಮ ಸಾಗಣೆ ಪ್ರಕರಣದ ಹಿಂದೆ ಕಾಣದ ಕೈಗಳು ಬೇಕಾದಷ್ಟು ಇದ್ದು, ಕೂಲಂಕುಷ ತನಿಖೆ ನಡೆಯಬೇಕಿದೆ. ಹಾಗಾಗಿ ಆರೋಪಿ ರನ್ಯಾ ಅವರನ್ನು 3 ದಿನಗಳ ಕಸ್ಟಡಿಗೆ ನೀಡಬೇಕೆಂದು ಕೋರಿ ಡಿಆರ್‌ಐ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದರ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಮತ್ತೊಂದೆಡೆ ರನ್ಯಾರಾವ್ ತಮಗೆ ಜಾಮೀನು ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದು, ಕಸ್ಟಡಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಬಳಿಕವೇ ಜಾಮೀನು ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
ರಾಮಚಂದ್ರರಾವ್ ಮೇಲೂ ಅನುಮಾನ!
ರನ್ಯಾರ ಮಲತಂದೆ ರಾಮಚಂದ್ರರಾವ್ ಅವರ ಪ್ರಭಾವವಿರುವ ಬಗ್ಗೆಯೂ ಡಿಆರ್‌ಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಭದ್ರತೆಯಿಂದ ವಿನಾಯಿತಿ ಸಿಗಲು ರಾಮಚಂದ್ರ ರಾವ್ ಪ್ರಭಾವವೇ ಕಾರಣ ಇರಬಹುದು ಎಂಬ ಬಗ್ಗೆ ತನಿಖೆಗಳು ನಡೆಯುತ್ತಿವೆ.
ಈ ಅನುಮಾನಗಳಿಗೆ ಸಂಬಂಧಿಸಿದಂತೆ ರಾಮಚಂದ್ರರಾವ್ ಮಾಧ್ಯಮ ಹೇಳಿಕೆ ನೀಡಿದ್ದು, ಈ ಪ್ರಕರಣದಿಂದ ಭಾರೀ ಆಘಾತವಾಗಿದೆ. ಆಕೆ ಹಾಗೂ ಆಕೆಯ ಪತಿ ಮದುವೆಯಾದ ಬಳಿಕ ನಮ್ಮ ಜತೆಅವರ ಢ ಮಾತನಾಡುತ್ತಿರಲಿಲ್ಲ. ನಮ್ಮ ನಡುವೆ ಅಂತರ ಬೆಳೆದಿತ್ತು. ಆದರೂ ಈ ಘಟನೆ ನಮ್ಮ ಕುಟುಂಬಕ್ಕೆ ಆದ ಕಪ್ಪುಚುಕ್ಕೆಯಾಗಿದೆ. ನಾನು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ನನ್ನ ಮೇಲೂ ಕ್ರಮವಾಗಲಿ ಎಂದಿದ್ದಾರೆ.
Congress worker arrested ವಿದ್ಯಾರ್ಥಿನಿ ಬದಲು ಪಿಯು ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಬಂಧನ