newsics.com
ಬೆಂಗಳೂರು: ಸೇವೆಯಿಂದ ವಜಾಗೊಂಡಿದ್ದರೂ ಉದ್ಯೋಗಿಗೂ ವಿಶೇಷ ರಜೆಗಳ ನಗದೀಕರಣಕ್ಕೆ ಅರ್ಹತೆ ಇರಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಮಾನತು ಮಾಡಿದ್ದ ಕಾರಣದಿಂದ ರಜೆ ನಗದೀಕರಣಕ್ಕೆ ಅವಕಾಶ ನೀಡದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಕ್ರಮವನ್ನು ಪ್ರಶ್ನಿಸಿ ಬ್ಯಾಂಕ್‌ನ ಮಾಜಿ ಸಹಾಯಕ ವ್ಯವಸ್ಥಾಪಕ ಜಿ. ಲಿಂಗನಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಿಶೇಷ ರಜೆ ನಗದೀಕರಣ ನಿರಾಕರಿಸಿ ಬ್ಯಾಂಕ್ 2017ರ ಡಿಸೆಂಬರ್ 13ರಂದು ಮತ್ತು 2024ರ ಅಕ್ಟೋಬರ್ 4ರಲ್ಲಿನ ಆದೇಶವನ್ನು ರದ್ದುಗೊಳಿಸಿದ ನ್ಯಾಯಾಲಯ, ಅರ್ಜಿದಾರರು ತಮ್ಮ ಸೇವೆಯ ಉದ್ದಕ್ಕೂ ಸಂಗ್ರಹವಾಗಿರುವ 220 ದಿನಗಳ ವಿಶೇಷ ರಜೆಗೆ ಅರ್ಹರು ಎಂದು ಘೋಷಿಸಿದೆ.
ಉದ್ಯೋಗಿಗೆ ಬ್ಯಾಂಕಿನ ನಿಯಮ 61ರಡಿಯಲ್ಲಿ ವಿಶೇಷ ರಜೆಯ ಹಕ್ಕಿದೆ. ನಿಯಮ 67 ಉದ್ಯೋಗಿಯ ವಿಶೇಷ ರಜೆಯನ್ನು ನಗದೀಕರಿಸುವ ಹಕ್ಕನ್ನು ಕಸಿದುಕೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ. ಎರಡೂ ಹೈಕೋರ್ಟ್‌ಗಳ ವಿಭಾಗೀಯ ಪೀಠವು ಹೇಳಿರುವ ಆದೇಶಗಳನ್ನು ಒಪ್ಪಿ ಈ ಆದೇಶ ನೀಡಲಾಗುತ್ತಿದೆ ಎಂದು ಪೀಠ ಹೇಳಿದೆ.
ಸಂವಿಧಾನದ 300ಎ ವಿಧಿಯನ್ನು ಉಲ್ಲೇಖ ಮಾಡಿರುವ ನ್ಯಾಯಪೀಠ, ಉದ್ಯೋಗದಾತರು ಸೇವೆಯಿಂದ ವಜಾಗೊಳಿಸಿದ ನಂತರ ನ್ಯಾಯಯುತವಾಗಿ ನೀಡಬೇಕಾದ ಪ್ರಯೋಜನದ ಯಾವುದೇ ಭಾಗವನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಅನುಮೋದಿಸಲಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ರಜೆಯ ನಗದೀಕರಣ ಕಾನೂನಿನಡಿಯಲ್ಲಿ ಮಾತ್ರವಲ್ಲದೆ ಸಂವಿಧಾನದ ಅಡಿಯಲ್ಲಿಯೂ ಉದ್ಯೋಗಿಯ ಹಕ್ಕು ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ 2012ರಲ್ಲಿ ಅರ್ಜಿದಾರರ ವಿರುದ್ಧ ದುರ್ನಡತೆ ಆರೋಪದ ಮೇಲೆ ಶಿಸ್ತು ಕ್ರಮಗಳನ್ನು ಆರಂಭಿಸಿತ್ತು. ವಿಚಾರಣೆಯ ನಂತರ 2014ರ ಡಿಸೆಂಬರ್ 19ರಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅರ್ಜಿದಾರರು ತಮ್ಮ ವಜಾ ನಂತರದ ಪ್ರಯೋಜನಗಳನ್ನು ಪಾವತಿಸುವಂತೆ ಕೋರಿ ಬ್ಯಾಂಕ್‌ಗೆ ಮನವಿ ಸಲ್ಲಿಸಿದ್ದರು.
ತಮ್ಮ ಸೇವಾ ಅವಧಿಯಲ್ಲಿ ಸಂಗ್ರಹವಾದ 220 ದಿನಗಳ ರಜೆಯ ನಗದೀಕರಣವನ್ನು ಕೋರಿದ್ದರು. ಆದರೆ, ಬ್ಯಾಂಕ್ ಸೇವೆಯಿಂದ ವಜಾಗೊಳಿಸಲಾಗಿದೆ ಎಂಬ ಕಾರಣಕ್ಕೆ ರಜೆ ನಗದೀಕರಣಕ್ಕೆ ನಿರಾಕರಿಸಿತ್ತು.
Health tips ಮುಟ್ಟಾಗೋದು ವಿಳಂಬ ಆಗ್ತಾ ಇದ್ಯಾ; ಪೀರಿಯಡ್ಸ್ ಲೇಟ್ ಆಗೋಕೆ ಇವೂ ಕೂಡ ಕಾರಣ