newsics.com
ಶತಾಯುಷಿ ದಂಪತಿ 84 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಪ್ರೀತಿಸಿ ಮದುವೆಯಾದ ಈ ಜೋಡಿ 13 ಮಕ್ಕಳು, 100ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದಿದ್ದು, ಸುದೀರ್ಘ ದಾಂಪತ್ಯ ಜೀವನ ನಡೆಸಿದ ದಾಖಲೆ ಬರೆದಿದ್ದಾರೆ.
ಬ್ರೆಜಿಲ್ನ ಮನೋಯೆಲ್ ಆಂಜೆಲಿಮ್ ಡಿನೋ ಮತ್ತು ಮಾರಿಯಾ ಡಿ ಸೌಸಾ ಡಿನೋ ದಂಪತಿ ಸುದೀರ್ಘ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿ ಎಂಬ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಮದುವೆಯಾಗಿ 84 ವರ್ಷ 77 ದಿನಗಳನ್ನು ಕಳೆದಿರುವ ಈ ಜೋಡಿಯ ಪ್ರೇಮಕಥೆ ಆರಂಭವಾಗಿದ್ದು 1936 ರಲ್ಲಿ. ಇದಾದ ಬಳಿಕ ನಾಲ್ಕು ವರ್ಷಗಳ ನಂತರ ಅಂದರೆ 1940 ರಲ್ಲಿ, ಅವರು ಬ್ರೆಜಿಲ್ನ ಸಿಯೆರಾದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಂದಿನಿಂದ ಇಂದಿನವರೆಗೂ ಈ ದಂಪತಿ ಒಟ್ಟಿಗೇ ಸುಂದರವಾದ ಜೀವನ ನಡೆಸಿಕೊಂಡು ಬಂದಿದ್ದಾರೆ. ಜತೆಗೆ ಈ ದಂಪತಿ 13 ಮಕ್ಕಳು, 55 ಮೊಮ್ಮಕ್ಕಳು, 54 ಮರಿ ಮೊಮ್ಮಕ್ಕಳು ಹೀಗೆ ಒಟ್ಟು 100ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದುವ ಮೂಲಕ ದೊಡ್ಡ ಕುಟಂಬವನ್ನೇ ಸೃಷ್ಟಿಸಿದ್ದಾರೆ.
105 ವರ್ಷ ವಯಸ್ಸಿನ ಮನೋಯೆಲ್ ಮತ್ತು 101 ವರ್ಷ ವಯಸ್ಸಿನ ಮಾರಿಯಾ ಪ್ರೀತಿಯ ಜೀವನ ಆನಂದಿಸುತ್ತಿದ್ದಾರೆ.
ವಯಸ್ಸಿನ ಕಾರಣದಿಂದಾಗಿ, ಮನೋಯೆಲ್ ದಿನದ ಹೆಚ್ಚಿನ ಸಮಯ ವಿಶ್ರಾಂತಿ ಪಡೆಯುತ್ತಾರೆ. ಆದರೆ ಪ್ರತಿದಿನ ಅವರು ಪತ್ನಿ ಮಾರಿಯಾ ಜತೆ ಸಂಜೆ 6 ಗಂಟೆಗೆ ರೇಡಿಯೊ ಕೇಳುತ್ತಾರಂತೆ. ತಮ್ಮ ಈ ಸುದೀರ್ಘ ಸುಖಿ ದಾಂಪತ್ಯ ಜೀವನದ ರಹಸ್ಯವೇ ‘ಪ್ರೀತಿ’ ಎನ್ನುತ್ತಾರೆ ಈ ವೃದ್ಧ ದಂಪತಿ.
ಶತಾಯುಷಿಗಳ ಸ್ಪೂರ್ತಿದಾಯಕ ಜೀವನದ ಕಥೆಗಳನ್ನು ಹೇಳುವ ಲಾಂಗೆವಿಕ್ವೆಸ್ಟ್ (longeviquest) ಸಂಸ್ಥೆಯು ಈ ದಂಪತಿಗಳ ಸ್ಫೂರ್ತಿದಾಯಕ ಸ್ಟೋರಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ.
ಇದಕ್ಕೂ ಮೊದಲು ಕೆನಡಾದ ಡೇವಿಡ್ ಜಾಕೋಬ್ ಹಿಲ್ಲರ್ ಮತ್ತು ಸಾರಾ ಡೇವಿ ಹಿಲ್ಲರ್ ಈ ದಾಖಲೆ ನಿರ್ಮಿಸಿದ್ದರು. ಅವರು 88 ವರ್ಷ ಮತ್ತು 349 ದಿನಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಇದೀಗ ಮನೋಯೆಲ್, ಮಾರಿಯಾ 84 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸುವ ಮೂಲಕ ಈ ದಾಖಲೆ ಬರೆದಿದ್ದಾರೆ.
Relstionship ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಇದ್ದರೆ ಈ ರೀತಿ ಮಾಡಿ
Husband distributed ಗಂಡನನ್ನೇ ಇಬ್ಬರು ಹೆಂಡತಿಯರಿಗೆ ಹಂಚಿದ ಕೌಟುಂಬಿಕ ಸಲಹಾ ಕೇಂದ್ರ! ಹಂಚಿಕೆ ಹೇಗಾಯ್ತು?