newsics.com
ಬಿಹಾರ: ಅಣ್ಣ ತಮ್ಮಂದಿರು, ಕುಟುಂಬಸ್ಥರು ಆಸ್ತಿ, ಪಾಸ್ತಿ, ಮನೆಗಳನ್ನು ಹಂಚಿಕೊಳ್ಳುವುದು ಸಾನ್ಯ. ಆದರೆ, ಇಬ್ಬರು ಹೆಂಡತಿಯರು ತಮ್ಮ ಗಂಡನನ್ನೇ ಹಂಚಿಕೊಂಡಿದ್ದಾರೆ. ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ ಎಂದು ವಾರದಲ್ಲಿ ಮೂರು ಮೂರು ದಿನಗಳಂತೆ ಪತಿರಾಯನನ್ನು ಪತ್ನಿಯರಿಬ್ಬರು ಹಂಚಿಕೊಂಡಿದ್ದು, ವಾರದ ಒಂದು ದಿನ ಗಂಡನಿಗೆ ರಜೆ ನೀಡಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಬಿಹಾರದ ಪೂರ್ಣಿಯಾ ಎಂಬಲ್ಲಿ ಈ ವಿಚಿತ್ರ ಪ್ರಕರಣ ನಡೆದಿದೆ. ಮೊದಲ ಹೆಂಡತಿಗೆ ತಿಳಿಸದೆ ಪತಿರಾಯ ಇನ್ನೊಬ್ಬಳನ್ನು ಮದುವೆಯಾಗಿದ್ದು, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ, ಪೊಲೀಸ್ ಮತ್ತು ಕುಟುಂಬ ಸಲಹಾ ಕೇಂದ್ರ ಗಂಡ ಮೂರು ದಿನ ಮೊದಲ ಹೆಂಡತಿಯ ಜತೆ ವಾರದಲ್ಲಿ ಮೂರು ದಿನ ಎರಡನೇ ಹೆಂಡತಿಯ ಜತೆ ಇರಬೇಕು, ಇನ್ನೂ ಉಳಿದ ಒಂದು ದಿನ ಆತ ಆ ಇಬ್ಬರು ಪತ್ನಿಯರಲ್ಲಿ ತನಗಿಷ್ಟವಾದವರ ಜತೆ ಇರಬಹುದು ಎಂದು ಗಂಡನನ್ನೇ ಇಬ್ಬರು ಹೆಂಡತಿಯರ ನಡುವೆ ಹಂಚಿಕೆ ಮಾಡಿದ್ದಾರೆ.
ಸುಮಾರು ಏಳು ವರ್ಷಗಳ ಹಿಂದೆ, ಆ ವ್ಯಕ್ತಿ ತನ್ನ ಮೊದಲ ಹೆಂಡತಿಗೆ ತಿಳಿಸದೆ ಎರಡನೇ ವಿವಾಹವಾದ. ಈ ಘಟನೆಯ ಬಗ್ಗೆ ಮೊದಲ ಪತ್ನಿಗೆ ತಿಳಿದಾಗ ಆಕೆ ಆಘಾತಕ್ಕೊಳಗಾದಳು. ಅಲ್ಲದೆ ಪೊಲೀಸರಿಗೆ ದೂರು ನೀಡಿದಳು. ಜತೆಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಲ್ಲದೆ, ಮೊದಲ ಪತ್ನಿ ಮತ್ತು ಮಕ್ಕಳನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳಲಿಲ್ಲ ಎಂಬ ಆರೋಪವೂ ಪತಿ ಮೇಲಿತ್ತು. ಈ ಬಗ್ಗೆ ಮೊದಲ ಪತ್ನಿ ಪೂರ್ಣಿಯಾ ಎಸ್‌ಪಿ ಕಾರ್ತಿಕೇಯ ಶರ್ಮಾ ಅವರಿಗೆ ದೂರು ನೀಡಿದ್ದು, ಎಸ್ಪಿ ಈ ವಿಚಿತ್ರ ಪ್ರಕರಣವನ್ನು ಕುಟುಂಬ ಸಮಾಲೋಚನಾ ಕೇಂದ್ರಕ್ಕೆ ಹಸ್ತಾಂತರಿಸಿದ್ದರು.
ಕೌಟುಂಬಿಕ ಸಲಹಾ ಕೇಂದ್ರದಲ್ಲಿ, ಮೊದಲ ಪತ್ನಿ ತನ್ನ ಪತಿ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾದರಲ್ಲದೆ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದಳು. ಈ ಸಂದರ್ಭದಲ್ಲಿ ಪತಿ ತನ್ನ ತಪ್ಪನ್ನು ಒಪ್ಪಿಕೊಂಡು ಮೊದಲ ಪತ್ನಿಯ ಬಳಿ ಹೋಗಲು ಬಯಸಿದಾಗ ಆತನ ಎರಡನೇ ಹೆಂಡತಿ ತಡೆದಿದ್ದು, ಇಬ್ಬರು ಹೆಂಡತಿಯರ ನಡುವಿನ ಜಗಳದಿಂದಾಗಿ ಈ ಪ್ರಕರಣ ಮತ್ತಷ್ಟು ಜಟಿಲವಾಯಿತು
ಕುಟುಂಬ ಸಲಹಾ ಕೇಂದ್ರದ ಸದಸ್ಯರು ಒಂದು ವಿಶಿಷ್ಟ ಪರಿಹಾರವನ್ನು ಕಂಡುಕೊಂಡರು. ಗಂಡನನ್ನು ಇಬ್ಬರು ಹೆಂಡತಿಯರ ನಡುವೆ ಹಂಚಲಾಯಿತು. ಮಕ್ಕಳ ಶಿಕ್ಷಣ ಮತ್ತು ಆಹಾರಕ್ಕಾಗಿ ಪತಿಯು ತನ್ನ ಮೊದಲ ಪತ್ನಿಗೆ ಪ್ರತಿ ತಿಂಗಳು 4,000 ರೂ.ಗಳನ್ನು ನೀಡಬೇಕೆಂದು ಆದೇಶಿಸಲಾಯಿತು. ಈ ನಿರ್ಧಾರಕ್ಕೆ ಇಬ್ಬರೂ ಹೆಂಡತಿಯರು ಒಪ್ಪಿಕೊಂಡರು. ಹೀಗೆ ಕುಟುಂಬ ಸಮಾಲೋಚನಾ ಕೇಂದ್ರ ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ಈ ವಿಶಿಷ್ಟ ನಿರ್ಧಾರ ತೆಗೆದುಕೊಂಡಿದೆ.