newsics.com
ಬ್ರೆಝಿಲ್: ಭಾರತದ ಆಂಧ್ರಪ್ರದೇಶದ ನೆಲ್ಲೂರು ತಳಿಯ ಹಸುವೊಂದು ಬರೋಬ್ಬರಿ 40 ಕೋಟಿ ರೂ.ಗೆ ಮಾರಾಟವಾಗಿದೆ.
ಬ್ರೆಜಿಲ್ನಲ್ಲಿ ನಡೆದ ಹರಾಜಿನಲ್ಲಿ 40 ಕೋಟಿ ರೂ.ಗೆ ಮಾರಾಟವಾದ ಭಾರತೀಯ ತಳಿಯ ನೆಲ್ಲೂರು ಹಸು, ಗಿನ್ನೆಸ್ ವಿಶ್ವ ದಾಖಲೆ ಪಡೆದಿದೆ.
ವಿಶ್ವದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಹಸುವಿನ ದಾಖಲೆ ಇದಾಗಿದೆ.
ವಯಟೀನಾ-19 ಎಂಬ ಈ ನೆಲ್ಲೂರು ಹಸುವಿನ ತೂಕ 1101 ಕೆ.ಜಿ. ಆಗಿದೆ. ಸಾಮಾನ್ಯ ನೆಲ್ಲೂರು ಹಸುವಿನ ತೂಕಕ್ಕಿಂತ ಎರಡು ಪಟ್ಟು ಹೆಚ್ಚು ತೂಕವನ್ನು ವಯಟೀನಾ-19 ಹೊಂದಿದೆ ಎಂದು ತಜ್ಞರು ಹೇಳುತ್ತಾರೆ.
53 ತಿಂಗಳ ವಯಸ್ಸಿನ (4.5 ವರ್ಷದ) ವಯಟೀನಾ-19ರ ಹಸು ಸುಂದರವಾದ ಬಿಳಿ ಕೂದಲು, ಸಡಿಲವಾದ ಚರ್ಮ ಮತ್ತು ಬೆನ್ನಿನ ಮೇಲಿನ ಗೂನು ಇದರ ಪ್ರಮುಖ ಆಕರ್ಷಣೆಗಳಾಗಿವೆ. ಆದ್ದರಿಂದಲೇ ಈ ಗೂಳಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು, ಟೆಕ್ಸಾಸ್ನ ಫೋರ್ಟ್ ವರ್ತ್ನಲ್ಲಿ ನಡೆದ ‘ಚಾಂಪಿಯನ್ ಆಫ್ ದಿ ವರ್ಲ್ಡ್’ ಸ್ಪರ್ಧೆಯಲ್ಲಿ ವಯಟೀನಾ-19 ಮಿಸ್ ಸೌತ್ ಅಮೆರಿಕ ಪ್ರಶಸ್ತಿಯನ್ನು ಗೆದ್ದಿತ್ತು. ವಿವಿಧ ದೇಶಗಳಿಂದ ಬಂದ ಹೋರಿ ಮತ್ತು ಹಸುಗಳು ಸ್ಪರ್ಧಿಸುವ ಮಿಸ್ ಯೂನಿವರ್ಸ್ ಮಾದರಿಯ ಜಾನುವಾರು ಸ್ಪರ್ಧೆ ಇದಾಗಿದೆ.
ಉಷ್ಣವಲಯದ ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ರೋಗ ನಿರೋಧಕ ಶಕ್ತಿಗೆ ಹೆಸರುವಾಸಿಯಾದ ತಳಿ ನೆಲ್ಲೂರು ಹಸು. ಆದ್ದರಿಂದಲೇ ವಯಟೀನಾ-19ರ ಭ್ರೂಣಗಳಿಗೆ ಸಂತಾನೋತ್ಪತ್ತಿಗಾಗಿ ಜಾಗತಿಕವಾಗಿ ಹೆಚ್ಚಿನ ಬೇಡಿಕೆಯಿದೆ.
ವಿಶ್ವದಲ್ಲಿ ನೆಲ್ಲೂರು ಹಸುಗಳನ್ನು ಹೆಚ್ಚು ಉತ್ಪಾದಿಸುವ ದೇಶ ಬ್ರೆಜಿಲ್. ಅಮೆರಿಕ, ಮೆಕ್ಸಿಕೊ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಬ್ರೆಜಿಲ್ನಲ್ಲಿರುವ ಕನಿಷ್ಠ 80 ಪ್ರತಿಶತ ಹಸುಗಳು ಜೆಬು ಹಸುಗಳಾಗಿವೆ. ಇದು ಭಾರತದಲ್ಲಿ ಹುಟ್ಟಿಕೊಂಡ ಒಂದು ಉಪಜಾತಿಯಾಗಿದ್ದು, ಅದರ ಗೂನು ಮತ್ತು ಡ್ಯೂಲ್ಯಾಪ್ನಿಂದ ಗುರುತಿಸಲ್ಪಟ್ಟಿದೆ. ವಿಯಾಟಿನಾ-19 ನೆಲ್ಲೂರು ತಳಿಗೆ ಸೇರಿದ್ದು, ಇದನ್ನು ಒಂಗೋಲ್ ತಳಿ ಎಂದೂ ಕರೆಯುತ್ತಾರೆ.