newsics.com
ಬೆಂಗಳೂರು: ಕರ್ನಾಟಕದಾದ್ಯಂತ ಮೈಸುಡುವ ಬಿಸಿಲು ಕಂಡು ಬರುತ್ತಿದ್ದು, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಪ್ರಮಾಣ ಏರಿಕೆ ಆಗುತ್ತಿದೆ. ಕಳೆದ ಎರಡು ವಾರಗಳ ಹಿಂದೆ ಚಳಿಗೆ ನಡಗುತ್ತಿದ್ದ ಜನರು ಇದೀಗ ಬಿಸಿಲಿಗೆ ತತ್ತರಿಸುತ್ತಿದ್ದಾರೆ. ಕನಿಷ್ಠ ತಾಪಮಾನ ಸಾಮಾನ್ಯವಾಗಿದ್ದರೆ, ಗರಿಷ್ಠ ತಾಪಮಾನ ಕೆಲ ಜಿಲ್ಲೆಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಹವಾಮಾನ ವೈಪರೀತ್ಯದಿಂದ ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ತಾಪಮಾನವು ದಾಖಲಾಗುವ ಸಾಧ್ಯತೆಗಳಿವೆ. ಗಾಳಿಯಲ್ಲಿ ತೇವಾಂಶ ಕಡಿಮೆಯಾಗಿರುವುದು, ಮಳೆಯ ಪ್ರಮಾಣ ಕಡಿಮೆಯಾಗಿರುವುದು ಸೇರಿದಂತೆ ಇನ್ನೀತರ ಕಾರಣಗಳಿಂದ ಬೆಂಗಳೂರಿನಲ್ಲಿ ಈ ಬಾರಿ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ನಿರೀಕ್ಷಿಸಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿರುವ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಗರಿಷ್ಠ ಉಷ್ಣಾಂಶವು 39 ಡಿ.ಸೆ.ವರೆಗೂ ಏರಿಕೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿರುವ ಅವರು, ಬೆಂಗಳೂರಿನಲ್ಲಿ ಈ ಬಾರಿ ಏಪ್ರಿಲ್ ಹಾಗೂ ಮೇನಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯವಾಗಿ 36 ರಿಂದ 38 ಡಿ.ಸೆ.ವರೆಗೂ ಹೆಚ್ಚಳವಾಗುವ ಸಾಧ್ಯತೆಗಳಿವೆ. ಕೆಲವೊಮ್ಮೆ ಇದರ ಪ್ರಮಾಣ 39 ಡಿ.ಸೆ. ವರೆಗೂ ಏರಿಕೆಯಾಗಬಹುದು ಎಂದು ಮಾಹಿತಿ ನೀಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33ರಿಂದ 35 ಡಿ.ಸೆ
ಇನ್ನು ಮುಂದಿನ 7 ದಿನಗಳವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಗಳಿವೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮುಂದಿನ 7 ದಿನಗಳವರೆಗೆ ಗರಿಷ್ಠ ಉಷ್ಣಾಂಶವು 31 ಡಿ.ಸೆ.ಯಿಂದ 33 ಡಿ.ಸೆ ಇರುವ ಹೆಚ್ಚಿನ ಸಾಧ್ಯತೆಗಳಿವೆ. ಕಲಬುರಗಿ ಹಾಗೂ ಬಾಗಲಕೋಟೆ ಸೇರಿದಂತೆ ಉತ್ತರ ಒಳನಾಡಿನಲ್ಲಿ ಗರಿಷ್ಠ ಉಷ್ಣಾಂಶವು ಸುಮಾರು 31 ರಿಂದ 37 ಡಿ.ಸೆ. ಇರುವ ಸಾಧ್ಯತೆಗಳಿವೆ.