newsics.com
ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆ ಬಳಿಕ ಈಗ ಮೆಟ್ರೋ ಪ್ರಯಾಣ ದರ ಏರಿಸಲು ಸರ್ಕಾರ ಮುಂದಾಗಿದೆ.
ಮೆಟ್ರೋ ಪ್ರಯಾಣ ದರದಲ್ಲಿ ಶೇ.40 ರಿಂದ 45ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ದರ ಏರಿಕೆ ಕುರಿತಂತೆ ಬಿಎಂಆರ್ಸಿಎಲ್ ಮಂಡಳಿಯು ಶುಕ್ರವಾರ ಒಪ್ಪಿಗೆ ಸೂಚಿಸಿದ್ದು, ಶನಿವಾರ(ಜ.18) ಅಧಿಕೃತ ಘೋಷಣೆ ಮಾಡಲಿದೆ.
ಶಾಂತಿನಗರದ ಬಿಎಂಆರ್ಸಿಎಲ್ ಮುಖ್ಯ ಕಚೇರಿಯಲ್ಲಿ ದರ ಏರಿಕೆ ವಿಚಾರವಾಗಿ ಶುಕ್ರವಾರ ನಡೆದ ಸಭೆಯಲ್ಲಿ ದರ ಏರಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಶನಿವಾರ ಸುದ್ದಿಗೋಷ್ಠಿ ಮಾಡಲಿರುವ ಬಿಎಂಆರ್ಸಿಎಲ್, ಅಧಿಕೃತ ಘೋಷಣೆ ಮಾಡಲಿದೆ.
ಯಾವತ್ತಿನಿಂದ ದರ ಹೆಚ್ಚಳ ಮಾಡಬೇಕು ಎನ್ನುವ ಬಗ್ಗೆ ಬಿಎಂಆರ್ಸಿಎಲ್ ಮಂಡಳಿ ಸೂಚಿಸಿದ್ದು, ಅದರಂತೆ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಎಷ್ಟಾಗಬೇಕು, ಎಷ್ಟು ದರ ನಿಗದಿ ಎನ್ನುವ ಬಗ್ಗೆ BMRCL ಶನಿವಾರ ನಿರ್ಧರಿಸಲಿದೆ. ಮೂಲಗಳ ಪ್ರಕಾರ ಜ.20ರಿಂದಲೇ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತೆಯಿದೆ.
ಪ್ರಸ್ತುತ ಮೆಟ್ರೋ ಪ್ರಯಾಣ ದರ ಕನಿಷ್ಠ 10 ರೂ. ಇದ್ದು, ಇದರಲ್ಲಿ ಯಾವುದೇ ಹೆಚ್ಚಳವಾಗುವ ಸಾಧ್ಯತೆಯಿಲ್ಲ. ಗರಿಷ್ಠ 60 ರೂ. ಇರುವ ದರದಲ್ಲಿ 90 ರೂ.ವರೆಗೆ ಹೆಚ್ಚಳವಾಗಲಿದೆ. ಪ್ರತಿ ಎರಡು ಕಿ.ಮೀ ನಂತರ ಹತ್ತು ರೂ.ಗಳಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.