newsics.com
ಕಾರವಾರ: ರಾಸಾಯನಿಕ ಸೋರಿಕೆಯಾಗಿ 18ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಕಾರವಾರದ ಬಿಣಗಾ ಬಳಿಯ ಆದಿತ್ಯ ಬಿರ್ಲಾ ಕಂಪನಿಯಲ್ಲಿ ಶನಿವಾರ ನಡೆದಿದೆ.
ತಾಲ್ಲೂಕಿನ ಬಿಣಗಾದಲ್ಲಿರುವ ಆದಿತ್ಯ ಬಿರ್ಲಾ ಗ್ರೂಪ್’ಗೆ ಸೇರಿರುವ ಗ್ರಾಸಿಮ್ ಇಂಡಸ್ಟ್ರೀಸ್’ನ ಕಾಸ್ಟಿಕ್ ಸೋಡಾ ಉತ್ಪಾದನಾ ಘಟಕದಲ್ಲಿ ಈ ಘಟನೆ ನಡೆದಿದೆ.
ಅಸ್ವಸ್ಥಗೊಂಡ ಕಾರ್ಮಿಕರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟಕದಲ್ಲಿ ಕಾರ್ಯನಿರ್ವಹಿಸುವ ವೇಳೆ ತಾಂತ್ರಿಕ ಸಮಸ್ಯೆಯಿಂದ ರಾಸಾಯನಿಕ ಸೋರಿಕೆ ಉಂಟಾಯಿತು. ಕಣ್ಣು ಉರಿ ಉಂಟಾಗಿ, ಉಸಿರಾಟ ಸಮಸ್ಯೆಯಿಂದ ಕೆಲವು ಕಾರ್ಮಿಕರು ಬಳಲಿದ್ದರು. ತಕ್ಷಣ ಅವರನ್ನು ಘಟಕದಿಂದ ಹೊರಕ್ಕೆ ಕರೆತರಲಾಯಿತು ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕ, ಉತ್ತರ ಪತ್ರದೇಶ ಹಾಗೂ ಬಿಹಾರ ಮೂಲದವರಾದ ನೀಲಕಂಠ (22), ಜಹಾನೂರ (20), ಕಮಲೇಶ ವರ್ಮಾ (22), ನಂದಕಿಶೋರ (21), ದೀಪು (28), ಅಜೀಜ್ (23), ಕಲ್ಲು (37), ಸುಜನ್ (26), ನಜೀದುಲ್ಲಾ (24), ಬೇಜನಕುಮಾರ್ (27), ಕಿಶನ್ ಕುಮಾರ್ (28) ಮತ್ತು ಮೋಹಿತ ವರ್ಮಾ(21) ಅಸ್ವಸ್ಥಗೊಂಡವರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಕಂಪನಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕ್ಲೋರಿನ್ ಸೋರಿಕೆಯಿಂದ ಕಾರ್ಮಿಕನೋರ್ವ ಮೃತಪಟ್ಟಿದ್ದ ಘಟನೆ ನಡೆದಿತ್ತು.
ಇದೀಗ ಮತ್ತೆ ರಾಸಾಯನಿಕ ಸೋರಿಕೆಯಾಗಿದೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.