newsics.com
ಬೆಂಗಳೂರು: ಸಂಗೀತ ವಿದ್ವಾಂಸ, ಬಹುವಾದ್ಯ ಪರಿಣತ ಎಸ್. ಬಾಲಿ ಖ್ಯಾತಿಯ ಎಸ್ ಬಾಲಸುಬ್ರಹ್ಮಣ್ಯಂ ಅವರು ಗುರುವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಜ್ಯೂರಿ ಪ್ಯಾನೆಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಎಸ್ ಬಾಲಿ ಅವರು ಮೃದಂಗ, ತಬಲಾ, ಢೋಲಕ್ , ಢೋಲ್ಕಿ, ಖಂಜರಿ, ಕೋಲ್ ಹೀಗೆ ಹತ್ತು ಹಲವು ಲಯವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ಅಪರೂಪದ ವಿದ್ವಾಂಸರಾಗಿದ್ದರು.
ಕನ್ನಡ ಚಿತ್ರರಂಗದ ಅನೇಕ ಸಂಗೀತ ಸಾಧಕರು ಬಾಲಿ ಅವರನ್ನು ರಿದಂ ಕಿಂಗ್ ಎಂದೇ ಕರೆಯುತ್ತಿದ್ದರು. ಸುಗಮ ಸಂಗೀತದಲ್ಲೂ ಇವರು ಮಾಸ್ಟರ್, ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಕೆ ಇವರದು.
ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಯ ಮಗನಾಗಿ 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಬಾಲಿ ಅವರು ಜನಿಸಿದ್ದರು. ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಬೆಳೆಸಿಕೊಂಡ ಬಾಲಿ ಪಾಲಕ್ಕಾಡು ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು. ಮುಂದೆ ಅವರು ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ಪಕ್ಕವಾದ್ಯ ಸಹಕಾರದಲ್ಲಿ ಭಾಗಿಯಾಗಿದ್ದಾರೆ.
ಬಾಲಿಯವರು ಶಾಸ್ತ್ರೀಯವಾಗಿ ಕಲಿತದ್ದು ಮೃದಂಗ ಮಾತ್ರ. ಆದರೆ ತಮ್ಮ ಶ್ರದ್ಧೆಯಲ್ಲೇ ತಬಲ, ಢೋಲಕ್, ಢೋಲ್ಕಿ, ಖೋಲ್, ಖಂಜಿರ ಮುಂತಾದ ಹಲವಾರು ವಾದ್ಯಗಳನ್ನು ನುಡಿಸುವ ಪರಿಣತಿಯನ್ನು ಸಾಧಿಸಿದ್ದರು. ಹೀಗೆ ಸಕಲ ಲಯ ವಾದ್ಯಗಳ ನುಡಿಸುವಿಕೆಯಲ್ಲಿ ಪರಿಣತಿ ಪಡೆದ ಅಪರೂಪದ ಲಯವಾದ್ಯಗಾರ ಬಾಲಿ ಇನ್ನು ನೆನಪು ಮಾತ್ರ.
ಹೆಸರಾಂತ ಗಾಯಕರುಗಳಾದ ಬಾಳಪ್ಪ ಹುಕ್ಕೇರಿ, ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಶ್ಯಾಮಲಭಾವೆ, ಸಿ ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ ಮುಂತಾದವರ ಕಾರ್ಯಕ್ರಮಗಳಲ್ಲಿ ಬಾಲಿ ಸಾಥ್ ನೀಡಿದ್ದಾರೆ.
ಚಲನಚಿತ್ರ, ನೃತ್ಯ, ನಾಟಕ, ಕಿರುತೆರೆ, ಧ್ವನಿಮುದ್ರಣ ಕಾರ್ಯಗಳಲ್ಲಿ ಖ್ಯಾತ ಸಂಗೀತಗಾರರುಗಳಾದ ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಟಿ.ಜಿ. ಲಿಂಗಪ್ಪ, ಅನಂತಸ್ವಾಮಿ, ಅಶ್ವತ್ಥ್-ವೈದಿ ಮುಂತಾದವರ ಸಂಗೀತ ಸಂಯೋಜನೆಗಳಿಗೆ ಬಾಲಿ ಅವರು ಲಯ ಸಂಯೋಜನೆ ಮಾಡಿದ್ದಾರೆ.
ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್-ಅರೇಂಜರ್-ಕಂಡಕ್ಟರ್ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಶಂಕರನಾಗ್ ಅವರ ಸಂಕೇತ್ ಸ್ಟುಡಿಯೊ ಆರಂಭದ ದಿನಗಳಲ್ಲಿ ಎದುರಾಗಿದ್ದ ಸವಾಲುಗಳನ್ನು ಎದುರಿಸಲು ಬಾಲಿ ಹೆಗಲು ನೀಡಿದ್ದರು.
ಬಾಲಿ ಅವರು ಕನ್ನಡದ ಮೊಟ್ಟಮೊದಲ ಧ್ವನಿಸುರಳಿ ಕವಿ ನಿಸಾರ ಅಹಮದ್ ಅವರ ನಿತ್ಯೋತ್ಸವದಿಂದ ಮೊದಲುಗೊಂಡು ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ ವಾದ್ಯದ ನೆರವು ನೀಡಿದವರು. ಹಲವಾರು ಧ್ವನಿಸುರುಳಿಗಳು, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 1970ರ ದಶಕದಲ್ಲಿ ಬಾಲಿ ಬಹುಬೇಡಿಕೆಯ ವ್ಯಕ್ತಿಯಾಗಿದ್ದರು. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಗೌರವ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಬಾಲಿ ಭಾಜನರಾಗಿದ್ದಾರೆ.