newsics.com
ಕಲಬುರಗಿ: ನರ್ಸ್ ವೇಷದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ನಗರದ ಜಿಮ್ಸ್ ಸರ್ಕಾರಿ ಆಸ್ಪತ್ರೆಯಿಂದ ಅಪಹರಿಸಿದ್ದ ನವಜಾತ ಗಂಡು ಶಿಶು 36 ಗಂಟೆ ಬಳಿಕ ತಾಯಿ ಮಡಿಲು ಸೇರಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಗೆ ಜನಿಸಿದ ಮಗುವನ್ನು ನಗರದ ಜಿಮ್ಸ್ ಸರ್ಕಾರಿ ಆಸ್ಪತ್ರೆಯಿಂದ ನರ್ಸ್ ವೇಷದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಅಪಹರಣ ಮಾಡಿದ್ದರು.
ಪೋಲಿಸರ ನಾನಾ ಬಗೆಯ ತನಿಖೆಯ ನಂತರ ಅಪಹರಣವಾಗಿದ್ದ ಗಂಡು ಮಗು ಕೊನೆಗೂ ತಾಯಿಯ ಮಡಿಲು ಸೇರಿದೆ.
ಸೋಮವಾರ ಮಧ್ಯಾಹ್ನದ ಹೊತ್ತಿಗೆ ನಗರದ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್)ನ ತಾಯಿ ಮತ್ತು ಮಕ್ಕಳ ಚಿಕಿತ್ಸಾ ಘಟಕದಿಂದ ಆಸ್ಪತ್ರೆಯ ನರ್ಸ್ ವೇಷ ಧರಿಸಿ ಬಂದಿದ್ದ ಇಬ್ಬರು ಮಹಿಳಾ ಕಳ್ಳರು ಶಿಶುವಿನ ರಕ್ತ ಪರೀಕ್ಷೆ ಮಾಡಿಸಬೇಕು ಎಂಬ ನೆಪ ಹೇಳಿ ಮಗುವನ್ನು ಅಪಹರಿಸಿದ್ದರು.
ಶಿಶುವಿನ ಅಪಹರಣ ಕುರಿತು ಬ್ರಹ್ಮಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೋಲಿಸರು, ಮಗುವಿನ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆಗಿಳಿದಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.