newsics.com
ಇಸ್ಲಾಮಾಬಾದ್: ಭಯೋತ್ಪಾದಕರು ಗುರುವಾರ ಪ್ರಯಾಣಿಕರ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಕನಿಷ್ಠ 38 ಜನರು ಮೃತಪಟ್ಟು, 29 ಮಂದಿ ಗಾಯಗೊಂಡ ಘಟನೆ ವಾಯವ್ಯ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ನಡೆದಿದೆ.
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮುಖ್ಯ ಕಾರ್ಯದರ್ಶಿ ನದೀಮ್ ಅಸ್ಲಂ ಚೌಧರಿ ಈ ಮಾಹಿತಿ ನೀಡಿದ್ದಾರೆ.
ಕುರ್ರಾಮ್ ಬುಡಕಟ್ಟು ಜಿಲ್ಲೆಯಲ್ಲಿ ಸಂಭವಿಸಿದ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಮಹಿಳೆ ಮತ್ತು ಮಕ್ಕಳು ಸೇರಿದ್ದಾರೆ. ಇದು ದೊಡ್ಡ ದುರಂತ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಚೌಧರಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಬುಡಕಟ್ಟು ಪ್ರದೇಶದಲ್ಲಿನ ಭೂ ವಿವಾದದ ಬಗ್ಗೆ ಸಶಸ್ತ್ರ ಶಿಯಾ ಮತ್ತು ಸುನ್ನಿ ಮುಸ್ಲಿಮರ ನಡುವೆ ದಶಕಗಳಿಂದ ಉದ್ವಿಗ್ನತೆಯಿದ್ದು, ಈ ಹಿನ್ನೆಲೆಯಲ್ಲೇ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಆದರೆ, ಈವರೆಗೂ ಘಟನೆಯ ಹೊಣೆಯನ್ನು ಯಾವುದೇ ಉಗ್ರ ಗುಂಪು ಹೊತ್ತುಕೊಂಡಿಲ್ಲ.