newsics.com
ಬೆಂಗಳೂರು : ಶೀಘ್ರದಲ್ಲಿಯೇ ಮದುವೆಯಾಗಲಿರುವ ಜೋಡಿಯೊಂದು ನಡೆಸಿದ ಪ್ರೀ ವೆಡ್ಡಿಂಗ್ ಶೂಟ್ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಇಲ್ಲಿ ಮದುಮಗಳು ಭರತನಾಟ್ಯ ದಿರಿಸಿನಲ್ಲಿ, ಮದುಮಗ ಯಕ್ಷಗಾನ ವೇಷಧಾರಿಯಾಗಿ ನರ್ತಿಸುವ ಮೂಲಕ ವಿಶೇಷ ವಿಡಿಯೋ ರೂಪಿಸಿದ್ದಾರೆ.
ಸಪ್ತಪದಿ ತುಳಿಯಲು ಅಣಿಯಾಗಿರುವ ಶಿವಮೊಗ್ಗದ ಚಂದನ್ ಕಲಾಹಂಸ ಮತ್ತು ಉತ್ತರ ಕನ್ನಡ ಜಿಲ್ಲೆಯ ಭಾರ್ಗವಿ ಬಿಎಚ್ ಅವರ ವಿಶಿಷ್ಟ ಸಾಂಪ್ರದಾಯಿಕ ವಿವಾಹಪೂರ್ವ ಛಾಯಾಗ್ರಹಣದ ವಿಡಿಯೋ ವೈರಲ್ ಆಗಿದೆ. ಯಕ್ಷಗಾನ ಮತ್ತು ಭರತನಾಟ್ಯ ಕಲಾಪ್ರಕಾರಗಳ ಸಮ್ಮಿಳಿತದ ನೃತ್ಯದ ವಿಡಿಯೋ ಮನಮುಟ್ಟುವಂತಿದೆ.ಜೋಗ ಸಮೀಪದ ಕಾಳಮಂಜಿಯವರಾದ ಚಂದನ್ ಕಲಾಹಂಸ ಹಾಗೂ ಯಲ್ಲಾಪುರ ಸಮೀಪದ ಉಮ್ಮಚಗಿಯ ಭಾರ್ಗವಿ ಬಿಎಚ್ ಶೀಘ್ರದಲ್ಲಿಯೇ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ.
ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಹಾಗೂ ವಿಡಿಯೋಗಳ ಮೂಲಕ ತಮ್ಮ ಅಪೂರ್ವ ಸಂಗಮದ ನೆನಪುಗಳನ್ನು ಭದ್ರವಾಗಿ ಇರಿಸಬೇಕೆಂಬ ಬಯಕೆ ಎಲ್ಲರಂತೆ ಅವರಲ್ಲಿಯೂ ಮೂಡಿತ್ತು. ಪ್ರತಿಯೊಬ್ಬರೂ ಈ ಫೋಟೋಶೂಟ್ ವಿಭಿನ್ನವಾಗಿರಬೇಕು ಎಂದು ಅಪೇಕ್ಷಿಸುತ್ತಾರೆ. ಆದರೆ ಈ ಜೋಡಿಯ ಆಲೋಚನೆ ವಿಭಿನ್ನ ಮತ್ತು ವಿಶಿಷ್ಟವಾಗಿತ್ತು. ಇಬ್ಬರೂ ತಮ್ಮಲ್ಲಿನ ಕಲಾ ಪ್ರತಿಭೆಯನ್ನೇ ಏಕೆ ಬಳಸಿಕೊಳ್ಳಬಾರದು ಎಂದು ಚಿಂತನೆ ನಡೆಸಿದ್ದರು. ಭಾರ್ಗವಿ ಅವರು ಭರತನಾಟ್ಯದಲ್ಲಿ ಪ್ರವೀಣೆಯಾಗಿದ್ದರೆ, ಚಂದನ್ ಯಕ್ಷಗಾನದಲ್ಲಿ ಅಭಿರುಚಿ ಹೊಂದಿದವರು. ಅವರಿಬ್ಬರ ಆಸಕ್ತಿ, ಇಂತಹ ಅಪರೂಪದ ವಿಡಿಯೋ ಸೃಷ್ಟಿಗೆ ಪ್ರೇರಣೆಯಾಗಿದೆ.