newsics.com
ನವದೆಹಲಿ: ದೇಶದ ಅತಿ ದೊಡ್ಡ ಸ್ಟಾರ್ಟ್ಅಪ್ ಎನಿಸಿದ್ದ ಬೈಜುಸ್ (BYJUS) ಈಗ ಸಂಪೂರ್ಣ ದಿವಾಳಿಯಾಗಿದೆ ಎಂದು ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ ಘೋಷಿಸಿದ್ದಾರೆ.
ಒಂದು ಕಾಲದಲ್ಲಿ 22 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಸ್ಟಾರ್ಟ್ಅಪ್ ಆಗಿದ್ದ ಬೈಜುಸ್ನ ಪ್ರಸ್ತುತ ಮೌಲ್ಯ ಶೂನ್ಯ ಎಂದು ರವೀಂದ್ರನ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ದುಬೈನಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುದ್ದಿಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಶಿಕ್ಷಣ, ತಂತ್ರಜ್ಞಾನ ಕ್ಷೇತ್ರದಲ್ಲಿ ಬಹು ದೊಡ್ಡ ಖ್ಯಾತಿ ಗಳಿಸಿದ ಬೈಜುಸ್ ಕಂಪನಿಯನ್ನು ರಕ್ಷಿಸಬೇಕು ಎನ್ನುವ ಭರವಸೆಯಷ್ಟೇ ಉಳಿದಿದೆ ಎಂದು ಹೇಳಿದ್ದಾರೆ.
21ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಜುಸ್ ಕೋವಿಡ್-19 ಸಾಂಕ್ರಾಮಿಕದ ಕಾಲದಲ್ಲಿ ಆನ್ಲೈನ್ ಶಿಕ್ಷಣ ಕೋರ್ಸ್ಗಳನ್ನು ನೀಡುವ ಮೂಲಕ ಭಾರೀ ಜನಪ್ರಿಯವಾಯಿತು.
2022ರಲ್ಲಿ ಇದರ ಮೌಲ್ಯವು 22 ಶತಕೋಟಿ ಡಾಲರ್ಗೆ ಏರಿತ್ತು. ಆದರೆ ಹಲವು ತಿಂಗಳ ಕಾಲ ಪಾವತಿಸದ ಬಾಕಿ ಮತ್ತು ದುರುಪಯೋಗದ ಕಾರಣದಿಂದ ಹಲವು ಆರೋಪಗಳಿಗೆ ಗುರಿಯಾಗಿದೆ.
ನಾವು ನಮ್ಮ ಪ್ರಗತಿಯ ಬಗ್ಗೆ ಅತಿಯಾಗಿ ಅಂದಾಜು ಮಾಡಿದ್ದೆವು. ಒಂದೇ ಬಾರಿಗೆ ಹಲವು ಕ್ಷೇತ್ರಗಳನ್ನು ಪ್ರವೇಶಿಸಿದ್ದು ತುಂಬಾ ಆತುರದ ನಿರ್ಧಾರವಾಗಿತ್ತು ಎಂದು ರವೀಂದ್ರನ್ ತಿಳಿಸಿದರು.
ಕಂಪನಿ ಪಡೆದ 1 ಶತಕೋಟಿ ಡಾಲರ್ ದುರುಪಯೋಗದ ಬಗ್ಗೆ ಅಮೆರಿಕದ ಸಾಲದಾತರು ಆಗಸ್ಟ್ನಲ್ಲಿ ಭಾರತೀಯ ಸುಪ್ರೀಂ ಕೋರ್ಟ್ಗೆ ದೂರು ನೀಡಿದ ಬಳಿಕ ಬೈಜುಸ್ ಮೌಲ್ಯ ಕುಸಿತದ ಹಾದಿ ಹಿಡಿದು ಈಗ ದಿವಾಳಿಯಾಗಿದೆ. ಈ ದೂರಿನ ಕುರಿತು ಸುಪ್ರೀಂ ಕೋರ್ಟ್ ಇನ್ನೂ ತೀರ್ಪು ನೀಡಬೇಕಿದೆ.
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಪ್ರೌಢಶಾಲೆ ಶಿಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ
ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಲು ಎರಡೇ ಗಂಟೆ ಅವಕಾಶ: ಸಚಿವ ಖಂಡ್ರೆ ಮಾಹಿತಿ