newsics.com
ಶೀರ್ಷಿಕೆಯಿಂದ ಕೌತುಕ ಮೂಡಿಸಿರುವ ‘ಮೆಜೆಸ್ಟಿಕ್ 2’ ಸಿನಿಮಾದ ಶೂಟಿಂಗ್ ಮುಕ್ತಾಯದ ಹಂತದಲ್ಲಿದೆ. ಈ ಸಿನಿಮಾಗೆ ರಾಮು ನಿರ್ದೇಶನ ಮಾಡುತ್ತಿದ್ದಾರೆ. ಮೆಜೆಸ್ಟಿಕ್ ಏರಿಯಾದಲ್ಲಿ ಹುಟ್ಟಿ ಬೆಳೆದ ಹುಡುಗನ ಕಥೆಯನ್ನು ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.
ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ಅವರು ಹೀರೋ ಆಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ಅಮ್ಮಾ ಎಂಟರ್ ಪ್ರೈಸಸ್’ ಮೂಲಕ ಚಿತ್ರದುರ್ಗದ ಹೆಚ್. ಆನಂದಪ್ಪ ಅವರು ‘ಮೆಜೆಸ್ಟಿಕ್ 2’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಹಿರಿಯ ನಟಿ ಮಾಲಾಶ್ರೀ ಕೂಡ ನಟಿಸುತ್ತಿದ್ದಾರೆ.
‘ಮೆಜೆಸ್ಟಿಕ್ 2’ ಸಿನಿಮಾ ಹೀರೋ ಇಂಟ್ರಡಕ್ಷನ್ ಹಾಡಿನ ಚಿತ್ರೀಕರಣವನ್ನು ಇತ್ತೀಚಿಗೆ ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಮಾಡಲಾಯಿತು. ಅಣ್ಣಮ್ಮ ದೇವಿ ಜಾತ್ರೆಯ ಅದ್ದೂರಿ ಸೆಟ್ನಲ್ಲಿ ಶೂಟಿಂಗ್ ನಡೆದಿದೆ. ಇದೇ ಸಾಂಗ್ನಲ್ಲಿ ಮಾಲಾಶ್ರೀ ಮತ್ತು ನಾಯಕ ಭರತ್ ಕುಮಾರ್ ಅವರು ನೂರಾರು ಸಹ-ಕಲಾವಿದರ ಜೊತೆ ಹೆಜ್ಜೆ ಹಾಕಿದ್ದಾರೆ. ತ್ರಿಭುವನ್ ಅವರು ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.