newsics.com | ನ್ಯೂಸಿಕ್ಸ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳಲ್ಲಿ ವಾಹನ ಚಲಾಯಿಸುವ ಸವಾರರಿಗೆ ಬ್ರೇಕ್ ಹಾಕಲು ಸಚಿವ ಕೃಷ್ಣ ಬೈರೇಗೌಡ ಅವರು ಕಠಿಣ ಹೆಜ್ಜೆ ಇಟ್ಟಿದ್ದಾರೆ. ಫುಟ್ಪಾತ್ ಸವಾರಿ ಮಾಡುವವರಿಗೆ ಪ್ರಸ್ತುತ ವಿಧಿಸಲಾಗುತ್ತಿರುವ 500 ರೂಪಾಯಿ ದಂಡವನ್ನು ಬರೋಬ್ಬರಿ 5,000 ರೂಪಾಯಿಗೆ ಹೆಚ್ಚಿಸುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ನಗರದ ಸಂಚಾರ ಪೊಲೀಸ್ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ತೆರವುಗೊಳಿಸಲಾದ ಪಾದಚಾರಿ ಮಾರ್ಗಗಳಲ್ಲಿ ವಾಹನ ಸವಾರರು ಭಯವಿಲ್ಲದೆ ಗಾಡಿ ಓಡಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ನೀಡಲಾಗುತ್ತಿರುವ ಸಣ್ಣ ಪ್ರಮಾಣದ ದಂಡದಿಂದ ಅಪರಾಧ ತಡೆಯಲು ಸಾಧ್ಯವಿಲ್ಲ. ಹೀಗಾಗಿ ದಂಡದ ಮೊತ್ತವನ್ನು 5,000 ರೂ.ಗೆ ಏರಿಸಿದರೆ ಮಾತ್ರ ವಾಹನ ಚಾಲಕರಲ್ಲಿ ಭಯ ಮೂಡಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.
ಇದೇ ವೇಳೆ ನಗರದ ಮುಖ್ಯ ರಸ್ತೆಗಳಲ್ಲಿ (ಆರ್ಟಿಲಿಯರ್ ಹಾಗೂ ಸಬ್ ಆರ್ಟಿಲಿಯರ್) ಸಂಚಾರ ಸುಗಮಗೊಳಿಸಲು ‘ಒನ್-ಸೈಡ್ ಪಾರ್ಕಿಂಗ್’ ಅಥವಾ ‘ಪರ್ಯಾಯ ಪಾರ್ಕಿಂಗ್’ (Alternate Parking) ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ದಿನಕ್ಕೊಂದು ಬದಿ ಪಾರ್ಕಿಂಗ್ ನಿಯಮ ಪಾಲಿಸಿದರೆ ರಸ್ತೆಯಲ್ಲಿ 7 ರಿಂದ 8 ಅಡಿ ಜಾಗ ಉಳಿದು ವಾಹನ ದಟ್ಟಣೆ ಕಡಿಮೆಯಾಗಲಿದೆ. ಇದಕ್ಕೆ ಹೊಸ ಅಧಿಸೂಚನೆ ಅಗತ್ಯವಿಲ್ಲ, ಪೊಲೀಸ್ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಇನ್ನು ಸಿಗ್ನಲ್ ಹಾಗೂ ಜಂಕ್ಷನ್ಗಳ ಬಳಿ ವಾಹನ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಬಿಎಂಟಿಸಿ ಬಸ್ಗಳು ಸೇರಿದಂತೆ ಯಾವುದೇ ವಾಹನಗಳು ಅನಗತ್ಯವಾಗಿ ಸಿಗ್ನಲ್ ಬಳಿ ನಿಲ್ಲದಂತೆ ತಡೆಯಲು ನಿರ್ದೇಶಿಸಲಾಯಿತು. ಸಿಗ್ನಲ್ಗಳಿಂದ 750 ಮೀಟರ್ ಹಾಗೂ ಜಂಕ್ಷನ್ಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣಗಳಿದ್ದರೆ ಅವುಗಳನ್ನು ತಕ್ಷಣವೇ ಸ್ಥಳಾಂತರಿಸಲು ಸೂಚನೆ ನೀಡಲಾಯಿತು. ಸಭೆಯಲ್ಲಿ ಸಂಚಾರಿ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವು ಪ್ರಮುಖ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ