newsics.com | ನ್ಯೂಸಿಕ್ಸ್
ಆರ್‌ಸಿಬಿ (RCB) ಅಭಿಮಾನಿಗಳ ನೆಚ್ಚಿನ ‘ಕ್ವೀನ್’ ಸ್ಮೃತಿ ಮಂದಾನಾ ದಿಢೀರನೆ ‘ಲಕ್ನೋ ಸೂಪರ್ ಜೈಂಟ್ಸ್’ (LSG) ಜರ್ಸಿಯಂತಹ ಉಡುಪಿನಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ನಮ್ಮ ನಾಯಕಿ ಆರ್‌ಸಿಬಿ ಬಿಟ್ಟು ಬೇರೆ ತಂಡ ಸೇರಿಬಿಟ್ರಾ ಎಂದು ಅಭಿಮಾನಿಗಳು ಒಂದು ಕ್ಷಣ ತಬ್ಬಿಬ್ಬಾಗಿದ್ದರೂ, ಈ ವೈರಲ್ ಫೋಟೋದ ಹಿಂದಿರುವ ಅಸಲಿ ಸತ್ಯವೇ ಬೇರೆಯಾಗಿದೆ.
ಇದು ಐಪಿಎಲ್ ಅಥವಾ ಡಬ್ಲ್ಯೂಪಿಎಲ್‌ಗೆ ಸಂಬಂಧಿಸಿದ ಬದಲಾವಣೆಯಲ್ಲ. ಬದಲಾಗಿ, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ‘ದಿ ಹಂಡ್ರೆಡ್’ (The Hundred) ಲೀಗ್ ಟೂರ್ನಿಗಾಗಿ ಸ್ಮೃತಿ ಮಂದಾನಾ ಈ ಹೊಸ ಜರ್ಸಿಯನ್ನು ತೊಟ್ಟಿದ್ದಾರೆ.
ಇಂಗ್ಲೆಂಡ್‌ನ ಈ 100 ಎಸೆತಗಳ ಟೂರ್ನಿಯಲ್ಲಿ ಸ್ಮೃತಿ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಈ ಮುಂಚೆ ‘ಮ್ಯಾಂಚೆಸ್ಟರ್ ಒರಿಜಿನಲ್ಸ್’ ಹೆಸರಿನಲ್ಲಿದ್ದ ಈ ಫ್ರಾಂಚೈಸಿಯ ಪ್ರಮುಖ ಪಾಲುದಾರಿಕೆಯನ್ನು ಲಕ್ನೋ ಸೂಪರ್ ಜೈಂಟ್ಸ್ ಮಾಲೀಕರಾದ ಸಂಜೀವ್ ಗೋಯೆಂಕಾ ಗ್ರೂಪ್ ಖರೀದಿಸಿದೆ. ಹೀಗಾಗಿ, ಈ ತಂಡವು ಎಲ್‌ಎಸ್‌ಜಿ ಹಾಗೂ ಡರ್ಬನ್ ಸೂಪರ್ ಜೈಂಟ್ಸ್ ಕುಟುಂಬದ ಭಾಗವಾಗಿದ್ದು, ಒಂದೇ ಮಾಲೀಕರಾಗಿರುವುದರಿಂದ ಜರ್ಸಿಯ ಶೈಲಿ ಮತ್ತು ಬಣ್ಣ ಒಂದೇ ರೀತಿಯಾಗಿದೆ.
Smriti Mandhana. Super Giant 👑 pic.twitter.com/UNWUNViHFJ
— Manchester Super Giants (@ManchesterSG100) July 20, 2026
ಈ ಬಾರಿಯ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಸ್ಮೃತಿ ಮಂದಾನಾ ಆಟಗಾರ್ತಿಯಾಗಿ ಮಾತ್ರವಲ್ಲದೆ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡದ ಉಪನಾಯಕಿಯಾಗಿಯೂ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಆಟಗಾರ್ತಿ ಮೆಗ್ ಲ್ಯಾನಿಂಗ್ ಅವರೊಂದಿಗೆ ಸ್ಮೃತಿ ಇನಿಂಗ್ಸ್ ಆರಂಭಿಸಲಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸ್ಮೃತಿ, ಅದೇ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ, ಅವರು ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿಯ ಕ್ಯಾಪ್ಟನ್ ಆಗಿಯೇ ಮುಂದುವರಿಯಲಿದ್ದಾರೆ.