newsics.com | ನ್ಯೂಸಿಕ್ಸ್
ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟಾರ್ ನಟ, ‘ನಟಸಿಂಹ’ ನಂದಮೂರಿ ಬಾಲಕೃಷ್ಣ ಅವರು ತಮ್ಮ ಮುಂಬರುವ ಬಹುನಿರೀಕ್ಷಿತ ‘NBK 111’ ಚಿತ್ರದ ಚಿತ್ರೀಕರಣದ ವೇಳೆ ಹಠಾತ್ ಅಪಘಾತಕ್ಕೀಡಾಗಿದ್ದು, ಮೊಣಕಾಲಿಗೆ ತೀವ್ರ ಗಾಯವಾಗಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ.
ಆಂಧ್ರಪ್ರದೇಶದ ಕಾಕಿನಾಡ ಬಂದರಿನಲ್ಲಿ ಮಾಸ್ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರ ಸಾರಥ್ಯದಲ್ಲಿ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಟ ಮಂಚು ಮನೋಜ್ ಹಾಗೂ ಬಾಲಕೃಷ್ಣ ಅವರ ನಡುವಿನ ಭೀಕರ ಫೈಟಿಂಗ್ ಸೀಕ್ವೆನ್ಸ್ ಶೂಟ್ ಮಾಡುವಾಗ ಬಾಲಯ್ಯ ಅವರ ಮೊಣಕಾಲಿಗೆ ಪೆಟ್ಟಾಗಿದೆ. ಕೂಡಲೇ ಸ್ಪಂದಿಸಿದ ಚಿತ್ರತಂಡ ಅವರನ್ನು ಆಸ್ಪತ್ರೆಗೆ ರವಾನಿಸಿದೆ. ತಪಾಸಣೆ ನಡೆಸಿದ ವೈದ್ಯರು ಸಣ್ಣ ಶಸ್ತ್ರಚಿಕಿತ್ಸೆಯ (Minor Surgery) ಅಗತ್ಯವಿದೆ ಎಂದು ತಿಳಿಸಿದ್ದು, ಕೆಲವು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.
ಮುಂಬೈ ಮಾಫಿಯಾ ಹಿನ್ನೆಲೆಯ ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಈ ಬಿಗ್ ಬಜೆಟ್ ಸಿನಿಮಾವನ್ನು ‘ವೃದ್ಧಿ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸುತ್ತಿದ್ದು, ಎಸ್‌ಎಸ್ ಥಮನ್ ಸಂಗೀತ ನೀಡುತ್ತಿದ್ದಾರೆ. ನಟಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವನ್ನು 2026ರ ಡಿಸೆಂಬರ್ 24ರಂದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
ಹಿಂದೆ ‘ವೀರಸಿಂಹ ರೆಡ್ಡಿ’ಯಂತಹ ಬ್ಲಾಕ್‌ಬಸ್ಟರ್ ನೀಡಿದ್ದ ಬಾಲಯ್ಯ-ಗೋಪಿಚಂದ್ ಕಾಂಬಿನೇಷನ್ ಮೇಲೆ ಭಾರಿ ನಿರೀಕ್ಷೆಗಳಿದ್ದು, ನೆಚ್ಚಿನ ನಟ ಶೀಘ್ರವೇ ಚೇತರಿಸಿಕೊಂಡು ಶೂಟಿಂಗ್‌ಗೆ ಮರಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ