newsics.com | ನ್ಯೂಸಿಕ್ಸ್
ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವಿಸುವುದು ಹೃದಯದ ಆರೋಗ್ಯಕ್ಕೆ ಹಿತಕಾರಿ ಎಂಬ ನಂಬಿಕೆ ಜನರಲ್ಲಿದೆ. ಆದರೆ, ಈ ಮಾತಿನಲ್ಲಿ ಯಾವುದೇ ಸತ್ಯವಿಲ್ಲ ಎಂದು ಇತ್ತೀಚಿನ ಜಾಗತಿಕ ಅಧ್ಯಯನವೊಂದು ಸ್ಪಷ್ಟಪಡಿಸಿದೆ. ದಿನಕ್ಕೆ ಕೇವಲ ಒಂದು ಸಣ್ಣ ಪೆಗ್ ಮದ್ಯ ಸೇವಿಸಿದರೂ ಸಹ ರಕ್ತದೊತ್ತಡ (BP) ಹೆಚ್ಚಾಗುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಸಂಶೋಧನೆಯ ಪ್ರಮುಖ ಅಂಶಗಳು
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ನ ‘ಹೈಪರ್ಟೆನ್ಷನ್ ಜರ್ನಲ್’ನಲ್ಲಿ ಈ ವರದಿ ಪ್ರಕಟವಾಗಿದೆ. ಸುಮಾರು 19,548 ಜನರ ಆರೋಗ್ಯ ಮಾಹಿತಿಯನ್ನು ವಿಶ್ಲೇಷಿಸಿ ಈ ತೀರ್ಮಾನಕ್ಕೆ ಬರಲಾಗಿದೆ.
- ಸಣ್ಣ ಪ್ರಮಾಣವೂ ಅಪಾಯಕಾರಿ: ದಿನಕ್ಕೆ ಕೇವಲ ಒಂದು ಡ್ರಿಂಕ್ಸ್ ತಗೊಂಡ್ರೂ ಬಿಪಿ ಹೆಚ್ಚಾಗುತ್ತದೆ. ಆರಂಭದಲ್ಲಿ ಇದು ಸಣ್ಣದಾಗಿ ಕಂಡರೂ, ದೀರ್ಘಕಾಲದಲ್ಲಿ ರಕ್ತನಾಳಗಳಿಗೆ ಹಾನಿ ಮಾಡುತ್ತದೆ.
- ಪ್ರಾಣಾಪಾಯದ ಭೀತಿ: ಮದ್ಯಪಾನದಿಂದ ಹೆಚ್ಚಾಗುವ ಬಿಪಿಯು ಮುಂದೆ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ನಂತಹ ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
- ಕಿಡ್ನಿಗೂ ತೊಂದರೆ: ಬಿಪಿ ಮಟ್ಟ 140/90 mmHg ಗಿಂತ ಹೆಚ್ಚಾದರೆ ಅದು ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು.
“ಮದ್ಯ ಸೇವಿಸದವರಿಗಿಂತ ಸ್ವಲ್ಪ ಕುಡಿಯುವವರಲ್ಲಿ ಯಾವುದೇ ವಿಶೇಷ ಆರೋಗ್ಯ ಪ್ರಯೋಜನಗಳು ಕಂಡುಬಂದಿಲ್ಲ. ಹೃದಯದ ಆರೋಗ್ಯಕ್ಕಾಗಿ ಮದ್ಯಪಾನವನ್ನು ಸಂಪೂರ್ಣವಾಗಿ ಬಿಡುವುದು ಒಳ್ಳೆಯದು” ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಪ್ರೊಫೆಸರ್ ಮಾರ್ಕೊ ವಿನ್ಸೆಟಿ ತಿಳಿಸಿದ್ದಾರೆ.
ಹೃದಯದ ಆರೋಗ್ಯಕ್ಕಾಗಿ ತಜ್ಞರ ಸರಳ ಸಲಹೆಗಳು
- ಮದ್ಯಪಾನ ಮತ್ತು ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಿ.
- ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಅಥವಾ ವಾಕಿಂಗ್ ಮಾಡಿ.
- ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಬಳಸಿ ಮತ್ತು ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಿ.
- ತೂಕ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.
- ಬಿಪಿ ಅಥವಾ ಶುಗರ್ ಇರುವವರು ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಿ.