newsics.com | ನ್ಯೂಸಿಕ್ಸ್
ಚಿಕ್ಕಬಳ್ಳಾಪುರ: ಉತ್ತರ ತಾಲೂಕಿನ ಕಾಡಯರಪ್ಪನಹಳ್ಳಿ ಬಳಿಯ ಖಾಸಗಿ ವಸತಿ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಗನ ಸಾವಿಗೆ ಶಾಲೆಯ ದೈಹಿಕ ಶಿಕ್ಷಕರ ಹಲ್ಲೆ ಹಾಗೂ ಅತಿಯಾದ ಒತ್ತಡವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಯಲಹಂಕ ತಾಲೂಕಿನ ಸುಬೇದಾರ್ ಪಾಳ್ಯದ ಗುರುಕಿರಣ್ ಮೃತ ವಿದ್ಯಾರ್ಥಿ. ಆತ ಕಾಡಯರಪ್ಪನಹಳ್ಳಿ ಬಳಿಯ ಸ್ಟರ್ಲಿಂಗ್ ಇಂಗ್ಲಿಷ್ ವಸತಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಬುಧವಾರ (ಜು.8) ಬೆಳಗ್ಗೆ ಗುರುಕಿರಣ್ಗೆ ಆರೋಗ್ಯ ಸರಿಯಿಲ್ಲ ಎಂದು ಶಾಲೆಯ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆತಂದಿರುವುದಾಗಿ ತಿಳಿಸಿದ್ದಾರೆ. ಆದರೆ ಪೋಷಕರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ.
ಬೆಳಗ್ಗೆ ಜಾಗಿಂಗ್ ವೇಳೆ ಶೌಚಾಲಯಕ್ಕೆ ಹೋಗಿ ಕೆಲ ನಿಮಿಷ ತಡವಾಗಿ ಬಂದಿದ್ದ ಗುರುಕಿರಣ್ಗೆ ದೈಹಿಕ ಶಿಕ್ಷಕ ನಾರಾಯಣ್ ಕತ್ತು ಬಗ್ಗಿಸಿ ಹೊಡೆದು ಹಲ್ಲೆ ನಡೆಸಿದ್ದಾನೆ. ಬಳಿಕ ಎರಡು ಸುತ್ತು ಓಡುವಂತೆ ಒತ್ತಾಯಿಸಿದ್ದಾನೆ. ಓಡಿ ಬಂದ ಕೆಲವೇ ಕ್ಷಣಗಳಲ್ಲಿ ಗುರುಕಿರಣ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಿದ್ಯಾರ್ಥಿ ಸಾವಿನ ಬಳಿಕ ಶಾಲೆಯ ಎದುರು ಜಮಾಯಿಸಿದ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿ, ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಆಕ್ರೋಶಗೊಂಡ ಸಂಬಂಧಿಕರು ವಾರ್ಡನ್ನನ್ನು ಎಳೆದಾಡಿ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಮುಂದೆಯೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೇ ವೇಳೆ ದೈಹಿಕ ಶಿಕ್ಷಕ ನಾರಾಯಣ್ನನ್ನೂ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ, ಆತನ ಮೇಲೂ ಹಲ್ಲೆ ನಡೆಸಲಾಗಿದೆ. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಘಟನಾ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಡಿಸಿಪಿ, ಎಸಿಪಿ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಯಿತು. ಈ ವೇಳೆ ಮೃತ ಬಾಲಕನ ತಂದೆ ಪೊಲೀಸ್ ವಾಹನದ ಮುಂದೆ ಮಲಗಿ, ನನ್ನ ಮಗನನ್ನು ಹೊಡೆದು ಸಾಯಿಸಿದ್ದಾರೆ, ನ್ಯಾಯ ಬೇಕು ಎಂದು ಕಣ್ಣೀರಿಟ್ಟಿದ್ದಾರೆ
ಬಾಗಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಸಾವಿಗೆ ನಿಖರ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಳಿಕ ತಿಳಿಯಬೇಕಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Trump- Iran ಇರಾನಿಯನ್ನರು ಭಾರೀ ಕೆಟ್ಟವರು, ಇರಾನ್ ಜತೆಗಿನ ಕದನ ವಿರಾಮ ಅಂತ್ಯ: ಟ್ರಂಪ್ ಘೋಷಣೆ