newsics.com/ನ್ಯೂಸಿಕ್ಸ್
ಉಬರ್ ಕ್ಯಾಬ್ ಚಾಲಕನ ವಿರುದ್ಧ ಬೆಂಗಳೂರು ನಗರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 30 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿದ್ದು, ಕ್ಯಾಬ್ ಪ್ರಯಾಣದ ವೇಳೆ ಚಾಲಕ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ದೂರಿನ ಅನ್ವಯ, ಜೂನ್ 21ರ ರಾತ್ರಿ ಮಹಿಳೆ ಕೊರಮಂಗಲದ ರೆಸ್ಟೋರೆಂಟ್ನಿಂದ ತನ್ನ ನಿವಾಸಕ್ಕೆ ತೆರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದು. ಪ್ರಯಾಣದ ವೇಳೆ ಇಂಡಿಯನ್ ಕ್ರಿಶ್ಚಿಯನ್ ಸಮಾಧಿ ಪ್ರದೇಶದ ಬಳಿ ಅವರು ಕೊಂಬುಚಾ ಪಾನೀಯದ ಬಾಟಲಿಯನ್ನು ತೆರೆದಿದ್ದಾರೆ. ಆದರೆ, ಚಾಲಕ ಪರಮೇಶ್ವರ್ ಆ ಪಾನೀಯವನ್ನು ಬಿಯರ್ ಎಂದು ತಪ್ಪಾಗಿ ಭಾವಿಸಿ, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದವೂ ನಡೆದಿದ್ದು, ಮಹಿಳೆಯು ಹಲವು ಬಾರಿ ವಾಹನವನ್ನು ನಿಲ್ಲಿಸಿ ತನ್ನನ್ನು ಇಳಿಸುವಂತೆ ಕೇಳಿಕೊಂಡರೂ, ಚಾಲಕ ಕಾರನ್ನು ನಿಲ್ಲಿಸದೆ ಮುಂದುವರಿದಿದ್ದಾನೆ. ಇದರಿಂದ ಭಯಗೊಂಡ ಮಹಿಳೆ ಚಲಿಸುತ್ತಿದ್ದ ಕಾರಿನ ಬಾಗಿಲು ತೆರೆದು ಹೊರಬರಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಚಾಲಕ ಮಹಿಳೆಯ ಕೈ ಹಿಡಿದು ಮತ್ತೆ ಕಾರಿನೊಳಗೆ ಎಳೆದು ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಮಹಿಳೆ ಹೇಗೋ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಹೋಗಿದ್ದು, ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅಶೋಕ್ ನಗರ ಪೊಲೀಸರು ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.