newsics.com/ನ್ಯೂಸಿಕ್ಸ್
ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಭಾರಿ ಗಾಳಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಇದೀಗ ಹವಾಮಾನ ಇಲಾಖೆ ಮಹತ್ವದ ಸೂಚನೆ ನೀಡಿದೆ. ಕೆಲೆವೆಡೆ ಆರೇಂಜ್ ಅಲರ್ಟ್ ನೀಡಲಾಗಿದೆ. ಇತ್ತ ಕೇದಾರನಾಥ ಯಾತ್ರೆ ತಾತ್ಕಾಲಿಕ ರದ್ದು ಮಾಡಲಾಗಿದೆ.
ಇನ್ನು ಕೆಲ ರಾಜ್ಯಗಳಲ್ಲಿ ಭಾರಿ ಗಾಳಿ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟ ದೆಹಲಿಯಲ್ಲಿ ನಿನ್ನೆ ಮಳೆಯಾಗಿದೆ. ಕೇರಳಕ್ಕೆ ಮುಂಗಾರು ಪ್ರವೇಶ ನಿಗದಿಗಿಂತ ವಿಳಂಬವಾಗಿದೆ. ಇತ್ತ ಎಲ್ ನಿನೋ ಭೀತಿ ಸೇರಿದಂತೆ ಹಲವು ಅಡ್ಡಿ ಆತಂಕದ ನಡುವೆ ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.
ಉತ್ತರಖಂಡದಲ್ಲಿ ಭಾರಿ ಮಳೆ ಮುನ್ಸೂಚನೆ ಇದೆ. ಈಗಾಗಲೇ ಉತ್ತರ ಖಂಡದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಿಮಾಲಯನ ತಪ್ಪಲು, ಹಿಮಾಲಯನ ಪರ್ವತ ಶಿಖರಗಳ ವಲಯದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಉತ್ತರಖಂಡದಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಮುನ್ನಚ್ಚೆರಿಕಾ ಕ್ರಮವಾಗಿ ಸರ್ಕಾರ ಕೇದಾರನಾಥ ಯಾತ್ರೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಉತ್ತರಖಂಡದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಮೆಘಸ್ಫೋಟ ಸೇರಿದಂತೆ ಪ್ರವಾಹ ಪರಿಸ್ಥಿತಿಯಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ. ಹೀಗಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡುತ್ತಿದ್ದಂತೆ ಇದೀಗ ಸರ್ಕಾರ ಕೇದಾರನಾಥ ಭಕ್ತರಿಗೆ ಸೂಚನೆ ನೀಡಿದೆ. ದರ್ಶನಕ್ಕೆ ಬೆಟ್ಟದ ಮೂಲಕ ತೆರಳುತ್ತಿರುವ ಭಕ್ತರು ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ರಕ್ಷಣೆ ಪಡೆಯುವಂತೆ ಸೂಚನೆ ನೀಡಲಾಗಿದೆ.
ಮೇ.30ರ ಸಂಜೆ ದೆಹಲಿಯಲ್ಲಿ ಭಾರಿ ಮಳೆ ಸುರಿದಿದೆ. ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ ಜನತೆ ನಿರಾಳರಾಗಿದ್ದಾರೆ. ಇತ್ತ ಇನ್ನು ಕೆಲ ದಿನಗಳ ಕಾಲ ದೆಹಲಿಯಲ್ಲಿ ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂಚಿಸಿದೆ. ನಿನ್ನೆ ಸುರಿದು ಮಳೆ ಹಾಗೂ ಭಾರಿ ಗಾಳಿಗೆ ದೆಹಲಿಯಲ್ಲಿ ಕಟ್ಟಡ ಕುಸಿದು ನಾಲ್ವರು ಮೃತಪಟ್ಟಿದ್ದಾರೆ.
ಬೆಂಗೆಳೂರಿನಲ್ಲಿ ಕಳೆದ ಎರಡು ದಿನ ಸತತ ಮಳೆಯಾಗಿದೆ. ಭಾರಿ ಮಳೆಯಿಂದ ಬೆಂಗಳೂರಿನ ಹಲವು ರಸ್ತೆಗಳು ನೀರಿನಿಂದ ಜಲಾವೃತಗೊಂಡಿತ್ತು. ಬೆಂಗಳೂರಿನಲ್ಲಿ ಕೆಲ ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.