newsics.com | ನ್ಯೂಸಿಕ್ಸ್
ಮಳೆ ಬರುವಾಗ ನಾವೆಲ್ಲರೂ ಚಹಾದ ಜೊತೆ ಇಷ್ಟಪಟ್ಟು ಸವಿಯುವ ಬಿಸಿಬಿಸಿ ಆಲೂಬೋಂಡಾ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಅಮೆರಿಕದ ಅತ್ಯಂತ ಪ್ರಸಿದ್ಧ ಕುಕ್ಕರಿ ಶೋ ಆದ ‘ಮಾಸ್ಟರ್‌ಶೆಫ್’ ವೇದಿಕೆಯಲ್ಲಿ ನಮ್ಮ ದೇಶಿ ಆಲೂಬೋಂಡಾ ಭಾರಿ ಹವಾ ಸೃಷ್ಟಿಸಿದ್ದು, ಜಗತ್ತಿನ ಖ್ಯಾತ ಶೆಫ್‌ಗಳು ಇದರ ರುಚಿಗೆ ಮನಸೋತಿದ್ದಾರೆ.
ಭಾರತೀಯ ಮೂಲದ ಐಶು ಚಲ್ಲಾ ಎಂಬ ಯುವತಿ ಅಮೆರಿಕದ ಈ ಪ್ರತಿಷ್ಠಿತ ವೇದಿಕೆಯಲ್ಲಿ ತಯಾರಿಸಿದ ಆಲೂಬೋಂಡಾ ಮತ್ತು ಚಟ್ನಿ, ವಿಶ್ವದ ಹತ್ತಾರು ದೇಶಗಳ ಐಷಾರಾಮಿ ತಿನಿಸುಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.
ಮಾಸ್ಟರ್‌ಶೆಫ್‌ನಲ್ಲಿ ‘ಇಮ್ಯುನಿಟಿ ಪಿನ್’ ಗೆದ್ದ ಐಶು
‘ಮಾಸ್ಟರ್‌ಶೆಫ್ ಯುಎಸ್‌ಎ ಸೀಸನ್ 16’ರ ಗ್ಲೋಬಲ್ ಗಾಂಟ್ಲೆಟ್ ಸ್ಪರ್ಧೆಯಲ್ಲಿ ಏಷ್ಯಾ-ಪೆಸಿಫಿಕ್ ತಂಡವನ್ನು ಪ್ರತಿನಿಧಿಸುತ್ತಿರುವ ಐಶು ಚಲ್ಲಾ, ಈ ಅದ್ಭುತ ಸಾಧನೆ ಮಾಡಿದ್ದಾರೆ.
ಬೇಯಿಸಿದ ಆಲೂಗಡ್ಡೆಗೆ ಜೀರಿಗೆ, ಮಸಾಲೆ ಹಾಗೂ ಹಸಿತೆಂಗಿನ ತುರಿ ಸೇರಿಸಿ ಗರಿಗರಿಯಾದ ಚಿನ್ನದ ಬಣ್ಣ ಬರುವಂತೆ ಐಶು ಬೋಂಡಾ ಸಿದ್ಧಪಡಿಸಿದ್ದರು. ಇದರ ಜೊತೆಗೆ ಅವರು ನೀಡಿದ ಪುದೀನಾ-ಕೊತ್ತಂಬರಿ ಹಾಗೂ ಕಾಯಿಚಟ್ನಿಯ ಕಾಂಬಿನೇಷನ್ ತೀರ್ಪುಗಾರರ ಬಾಯಲ್ಲಿ ನೀರೂರಿಸಿತು. ಆಲೂಬೋಂಡಾದ ಅದ್ಭುತ ರುಚಿಗೆ ಮನಸೋತ ಜಡ್ಜ್‌ಗಳು ಐಶು ಅವರಿಗೆ ಶೋನ ಅತ್ಯಂತ ಗೌರವಾನ್ವಿತ ‘ಇಮ್ಯುನಿಟಿ ಪಿನ್’ ನೀಡಿ ಸತ್ಕರಿಸಿದ್ದಾರೆ.
ವಿಶೇಷವೆಂದರೆ, ಈ ಶೋನ ವಿದೇಶಿ ತೀರ್ಪುಗಾರರು ನಮ್ಮ ಆಲೂಬೋಂಡಾವನ್ನು ‘ಸೇವರಿ ಡೋನಟ್’ (Savoury Donut – ಅಂದರೆ ಉಪ್ಪು ಹಾಗೂ ಖಾರವಿರುವ ಡೋನಟ್) ಎಂದು ಕರೆದು ಕೊಂಡಾಡಿದ್ದಾರೆ.
ಈ ಸಂಚಿಕೆ ಟಿವಿಯಲ್ಲಿ ಪ್ರಸಾರವಾದ ಬೆನ್ನಲ್ಲೇ, ವಿದೇಶಗಳಲ್ಲೂ ದಕ್ಷಿಣ ಭಾರತದ ಶೈಲಿಯ ಆಲೂಬೋಂಡಾ ಮಾಡುವುದು ಹೇಗೆ ಎಂಬ ಹುಡುಕಾಟ ಶುರುವಾಗಿದ್ದು, ಗೂಗಲ್‌ನಲ್ಲಿ ಇದರ ರೆಸಿಪಿಗಾಗಿ ಸಿಕ್ಕಾಪಟ್ಟೆ ಸರ್ಚ್ ಮಾಡಲಾಗುತ್ತಿದೆ. ನಮ್ಮ ಗಲ್ಲಿಗಳಲ್ಲಿ ಸಿಗುವ ಸಾಧಾರಣ ಆಲೂಬೋಂಡಾ ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತಿಹಿಡಿದಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ ಬಚಾವ್ ಮಾಡಿದ ತಾಯಿ!
