newsics.com | ನ್ಯೂಸಿಕ್ಸ್
ಬೆಂಗಳೂರು: ನಗರದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಆರಂಭಿಸುವುದಾಗಿ ಸಿಎಂ ಡಿ ಕೆ ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಕರ್ನಾಟಕವನ್ನು ‘ಎಐ-ನೇಟಿವ್’ ರಾಜ್ಯವನ್ನಾಗಿ ರೂಪಿಸುವುದು ಮತ್ತು ಆಡಳಿತ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ತಂತ್ರಜ್ಞಾನ ಸಂಯೋಜಿಸುವುದು. ಎಐ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು, ಸುಧಾರಿತ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ಸಹಯೋಗವನ್ನು ಬೆಳೆಸಲು ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಎಐ – ಸಹಾಯದ ಬೋಧನೆಯ ಮೂಲಕ ಶಿಕ್ಷಣ ಕ್ಷೇತ್ರ, ರೋಗಗಳ ಮುಂಚಿತ ಪತ್ತೆ ಮತ್ತು ಉತ್ತಮ ವೈದ್ಯಕೀಯ ಬೆಂಬಲದ ಮೂಲಕ ಆರೋಗ್ಯ ಕ್ಷೇತ್ರ, ರೈತರಿಗೆ ಎಐ – ಚಾಲಿತ ಸಲಹಾ ಸೇವೆಗಳ ಮೂಲಕ ಕೃಷಿ ಕ್ಷೇತ್ರ, ವೇಗದ ಮತ್ತು ಜನಸ್ನೇಹಿ ವಿತರಣೆಯ ಮೂಲಕ ಸರ್ಕಾರಿ ಸೇವೆಗಳು, ಎಐ ಪರಿಕರಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಸಣ್ಣ ಉದ್ಯಮಗಳಲ್ಲಿ ಬದಲಾವಣೆ ತರಲಾಗುವುದು ಎಂದು ತಿಳಿಸಿದರು.
ಸ್ಟೀಮ್ ಇಂಜಿನ್ ಕೈಗಾರಿಕಾ ರಂಗವನ್ನು ಕ್ರಾಂತಿಗೊಳಿಸಿತು. ವಿದ್ಯುತ್ ನಗರಗಳನ್ನು ಮಾರ್ಪಡಿಸಿತು. ಇಂಟರ್ನೆಟ್ ಸಂಪರ್ಕ ಮಾಧ್ಯಮವನ್ನೇ ಬದಲಾಯಿಸಿತು. ಮೊಬೈಲ್ ತಂತ್ರಜ್ಞಾನವು ಎಲ್ಲವನ್ನೂ ಸುಲಭವಾಗಿ ಲಭ್ಯವಾಗುವಂತೆ ಮಾಡಿತು. ಇಂದು, ಕೃತಕ ಬುದ್ಧಿಮತ್ತೆಯು (AI) ಸ್ವತಃ ಮಾನವ ಸಾಮರ್ಥ್ಯವನ್ನೇ ಮಾರ್ಪಡಿಸುವ ಭರವಸೆ ನೀಡುತ್ತಿದೆ ಎಂದರು.
ಕಳೆದ ಎರಡು ದಶಕಗಳಿಂದ, ಗೂಗಲ್ ಬೆಂಗಳೂರನ್ನು ಕೇವಲ ಒಂದು ಕಚೇರಿಯ ಸ್ಥಳವಾಗಿ ಮಾತ್ರವಲ್ಲದೇ, ಇಂಜಿನಿಯರಿಂಗ್, ಸಂಶೋಧನೆ ಮತ್ತು ನಾವೀನ್ಯತೆಗಾಗಿ ತನ್ನ ಅತ್ಯಂತ ಪ್ರಮುಖ ಜಾಗತಿಕ ಕೇಂದ್ರಗಳಲ್ಲಿ ಒಂದಾಗಿ ಆಯ್ಕೆ ಮಾಡಿಕೊಂಡಿದೆ. ಗೂಗಲ್ ಜೊತೆಗಿನ ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸುತ್ತೇವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೆ ಎಲ್ಲ ರೀತಿಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ. ಎಐ ತಂತ್ರಜ್ಞಾನ ಮೂಲಕ ನಮ್ಮ ನಗರದ ಸಂಚಾರ ಸಮಸ್ಯೆಗಳನ್ನು ನಿವಾರಿಸೋಣ. 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 70 ಲಕ್ಷ ಜನಸಂಖ್ಯೆ ಇತ್ತು. ಈಗ 1.40 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಸಂಚಾರ ದಟ್ಟಣೆ ಸಮಸ್ಯೆ ಇದ್ದು, ಇದನ್ನು ನಿವಾರಿಸಲು ನಾವು ಪರಿಹಾರ ಹುಡುಕುತ್ತಿದ್ದೇವೆ ಎಂದು ಹೇಳಿದರು.
ರಾಜ್ಯವನ್ನು ಎಐ ನೇಟಿವ್ ರಾಜ್ಯವಾಗಿಸುವ ಗುರಿ:
ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ಅನ್ನು ಸಂಯೋಜಿಸುವ ಮೂಲಕ ಕರ್ನಾಟಕವನ್ನು ‘ಎಐ-ನೇಟಿವ್’ (AI-native) ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಇದೇ ವೇಳೆ ಸಿಎಂ ತಿಳಿಸಿದರು.
ಎಐ ಆವಿಷ್ಕಾರ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳನ್ನು ಬೆಂಬಲಿಸಲು ಡೇಟಾ ಸೆಂಟರ್‌ಗಳು ಸೇರಿದಂತೆ ತನ್ನ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವ ಮೂಲಕ ಭಾರತದ ತಂತ್ರಜ್ಞಾನದ ಹಬ್ ಆಗಿ ಕರ್ನಾಟಕ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ. ಎಐ ಸಂಶೋಧನೆ, ಹೈಪರ್‌ಸ್ಕೇಲ್ ಕಂಪ್ಯೂಟಿಂಗ್ ಮತ್ತು ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳನ್ನು (GCCs) ಬೆಂಬಲಿಸುವ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
Teacher Recruitment ವಸತಿ ಶಾಲೆಗಳ 767 ಶಿಕ್ಷಕರ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ
Cow Urine ಸಗಣಿ ಬೂದಿಯೇ ಸನ್‌ಸ್ಕ್ರೀನ್, ಗೋಮೂತ್ರವೇ ಶಾಂಪೂ ಈ ಜನಾಂಗದ ಸಂಪ್ರದಾಯ ಕೇಳಿದ್ರೆ ಬೆರಗಾಗ್ತೀರಾ
Human Psychology ಯಾವಾಗಲೂ ಲೇಟಾಗಿ ಬರುವವರನ್ನು ‘ಸೋಮಾರಿ’ ಅಂದುಕೊಳ್ಳಬೇಡಿ, ಇದರ ಹಿಂದೆ ಇದೆ ಅಸಲಿ ಸೈಕಾಲಜಿ