newsics.com | ನ್ಯೂಸಿಕ್ಸ್
ಭೋಪಾಲ್: ಚಲಿಸುತ್ತಿದ್ದ ಟ್ರಕ್‌ಗೆ ಕಾರೊಂದು ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಬರ್ತ್‌ಡೇ ಮುಗಿಸಿ ಬರುವಾಗ ದುರಂತ
ಮೃತರನ್ನು ಅಂಕುರ್ ಪಟೇಲ್ (40), ಮೃದುಲ್ ಪಟೇಲ್ (32), ವಿಜಯ್ ಪಟೇಲ್ (30), ಹರಿಶಂಕರ್ ಪಟೇಲ್ (25) ಮತ್ತು ಶಿವ ಪಟೇಲ್ (23) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸ್ಥಳೀಯ ಕಾಂಗ್ರೆಸ್ ನಾಯಕ ಮನೀಶ್ ಪಟೇಲ್ ಅವರ ಸಹೋದರರಾಗಿದ್ದಾರೆ. ಇವರೆಲ್ಲರೂ ತಮ್ಮ ಸಂಬಂಧಿಯೊಬ್ಬರ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಕಾರಿನಲ್ಲಿ ಮನೆಗೆ ವಾಪಸ್ ಆಗುತ್ತಿದ್ದಾಗ ಹೆದ್ದಾರಿ-30ರ ರಿಗ್ರಾ ಗ್ರಾಮದ ಬಳಿ ಮುಂಜಾನೆ 1 ಗಂಟೆಗೆ ಈ ಅಪಘಾತ ಸಂಭವಿಸಿದೆ.
ಕಾರು ಅತಿ ವೇಗವಾಗಿ ಬಂದಿದ್ದರಿಂದ ಡಿಕ್ಕಿಯ ರಭಸಕ್ಕೆ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಭಾರಿ ಹರಸಾಹಸ ಪಟ್ಟು ಕಾರಿನಲ್ಲಿದ್ದವರನ್ನು ಹೊರತೆಗೆದಿದ್ದಾರೆ. ಆದರೆ ಅಷ್ಟರಲ್ಲೇ ಐವರು ಪ್ರಾಣ ಬಿಟ್ಟಿದ್ದರು.
ಅಪಘಾತದಲ್ಲಿ ಬದುಕುಳಿದಿರುವ ಮತ್ತೊಬ್ಬ ವ್ಯಕ್ತಿಗೆ ಸತ್ನಾ ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯಿಂದ ಇಡೀ ಗ್ರಾಮದಲ್ಲಿ ಕಣ್ಣೀರಿನ ವಾತಾವರಣ ನಿರ್ಮಾಣವಾಗಿದೆ.