newsics.com/ನ್ಯೂಸಿಕ್ಸ್
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿರುವ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಗಳಿಗಾಗಿ ತೀವ್ರ ಲಾಬಿ ಆರಂಭವಾಗಿದೆ. ಸಚಿವ ಸಂಪುಟ ರಚನೆಗೆ ಸಂಬಂಧಿಸಿದ ಚರ್ಚೆಗಳು ಜೋರಾಗಿರುವ ನಡುವೆ ಡಿಸಿಎಂ ಹುದ್ದೆಗಾಗಿ ಹಲವು ನಾಯಕರು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಹುದ್ದೆಗಳ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದರೂ, ಕಾಂಗ್ರೆಸ್ ಪಾಳಯದಲ್ಲಿ ಹುದ್ದೆಗಳಿಗಾಗಿ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ದಲಿತ ಕೋಟಾದಡಿ ಡಿಸಿಎಂ ಸ್ಥಾನಕ್ಕಾಗಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಪೈಪೋಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಡಾ. ಜಿ. ಪರಮೇಶ್ವರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಡಿಸಿಎಂ ಹುದ್ದೆ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಉಪ ಮುಖ್ಯಮಂತ್ರಿ ಸ್ಥಾನ ಜತೆಗೆ ಮಹತ್ವದ ಖಾತೆಯನ್ನೂ ನೀಡಬೇಕು ಎಂದು ಒತ್ತಾಯಿಸಿರುವುದಾಗಿ ಮೂಲಗಳು ತಿಳಿಸಿವೆ. ಸೂಕ್ತ ಸ್ಥಾನಮಾನ ಸಿಗದಿದ್ದರೆ ಸಚಿವ ಸಂಪುಟ ಸೇರುವ ಆಸಕ್ತಿ ಇಲ್ಲ, ಶಾಸಕರಾಗಿಯೇ ಮುಂದುವರೆಯುತ್ತೇನೆ ಎಂಬ ನಿಲುವನ್ನೂ ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ್ದ ಪ್ರಿಯಾಂಕ್ ಖರ್ಗೆ ಅವರ ಹೆಸರೂ ಡಿಸಿಎಂ ಹುದ್ದೆಯ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ದಲಿತ ಸಮುದಾಯದ ಯುವ ನಾಯಕನಾಗಿ ಗುರುತಿಸಿಕೊಂಡಿರುವ ಅವರು ಕೂಡ ಪ್ರಮುಖ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಸಿಎಂ ಹುದ್ದೆ ಮಾತ್ರವಲ್ಲದೆ ಸಚಿವ ಸ್ಥಾನಗಳಿಗೂ ಭಾರೀ ಪೈಪೋಟಿ ಏರ್ಪಟ್ಟಿದೆ. ಹಿಂದಿನ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದವರು ಮತ್ತೆ ಅವಕಾಶ ಪಡೆಯಲು ಪ್ರಯತ್ನಿಸುತ್ತಿದ್ದರೆ, ಹಿರಿಯ ಶಾಸಕರು ಹಾಗೂ ಹೊಸ ಮುಖಗಳೂ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಆಕಾಂಕ್ಷಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಇದೇ ವೇಳೆ, ನೂತನ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಕೆಲವು ನಾಯಕರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ಗೆ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆ ಪಟ್ಟಿಯಲ್ಲಿ ಎ.ಎಸ್. ಪೊನ್ನಣ್ಣ, ಶಿವರಾಜ್ ತಂಗಡಗಿ, ಪುಟ್ಟರಂಗ ಶೆಟ್ಟಿ, ಕೆ. ವೆಂಕಟೇಶ್, ಬಸವರಾಜ್ ರಾಯರೆಡ್ಡಿ, ಬಿ.ಕೆ. ಹರಿಪ್ರಸಾದ್, ಸಂತೋಷ್ ಲಾಡ್, ಹೆಚ್.ಸಿ. ಮಹದೇವಪ್ಪ ಹಾಗೂ ಜಮೀರ್ ಅಹಮದ್ ಖಾನ್ ಅವರ ಹೆಸರುಗಳಿವೆ ಎನ್ನಲಾಗಿದೆ.
ಸಚಿವ ಸಂಪುಟದ ಅಂತಿಮ ಪಟ್ಟಿಗೆ ಹೈಕಮಾಂಡ್ ಯಾವ ಮಾನದಂಡ ಅನುಸರಿಸಲಿದೆ ಹಾಗೂ ಡಿಸಿಎಂ ಹುದ್ದೆಗಳ ಸಂಖ್ಯೆಯನ್ನು ಎಷ್ಟು ನಿಗದಿಪಡಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
Water sports banned ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ 3 ತಿಂಗಳು ಜಲಸಾಹಸ ಕ್ರೀಡೆಗಳಿಗೆ ನಿಷೇಧ