newsics.com/ನ್ಯೂಸಿಕ್ಸ್
ಬೆಂಗಳೂರು: ಟಾಟಾ ಐಪಿಎಲ್ 2026ರ ಮಹತ್ವದ ಫೈನಲ್ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಲಗ್ಗೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯು ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳು ಹಾಗೂ ಸಾರ್ವಜನಿಕ ಸಲಹೆಯನ್ನು ಒಳಗೊಂಡ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.
ವಿಜಯೋತ್ಸವಕ್ಕೆ ಬ್ರೇಕ್: ಫೈನಲ್ ಪಂದ್ಯದ ಫಲಿತಾಂಶ ಪ್ರಕಟವಾದ ನಂತರ ಸಾರ್ವಜನಿಕರು ಯಾವುದೇ ರೀತಿಯಲ್ಲಿ ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ (Celebrations) ಮಾಡುವಂತಿಲ್ಲ.
ಪಟಾಕಿ ನಿಷೇಧ: ಯಾವುದೇ ಕಾರಣಕ್ಕೂ ಪಟಾಕಿಗಳನ್ನು ಸಿಡಿಸುವಂತಿಲ್ಲ ಮತ್ತು ಅಪಾಯಕಾರಿ ವಸ್ತುಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ರಸ್ತೆ ಮುಖದ ಸ್ಕ್ರೀನ್‌ಗಳಿಗೆ ಅನುಮತಿ ಇಲ್ಲ: ಸಂಬಂಧಪಟ್ಟ ಅಧಿಕಾರಿಗಳ ಮುನ್ಸೂಚನೆ ಅಥವಾ ಅನುಮತಿಯಿಲ್ಲದೆ ರಸ್ತೆಗಳಿಗೆ ಮುಖಮಾಡಿರುವ ಎಲ್‌ಇಡಿ ವಾಲ್‌ಗಳನ್ನು (LED Walls) ಅಳವಡಿಸುವಂತಿಲ್ಲ. ಈಗಾಗಲೇ ಇರುವ ಎಲ್‌ಇಡಿ ವಾಲ್‌ಗಳಲ್ಲಿ ಪಂದ್ಯವನ್ನು ಪ್ರಸಾರ ಮಾಡುವಂತಿಲ್ಲ.
ಮಾಲ್‌ಗಳುಹೊರಗೆ ಸ್ಕ್ರೀನಿಂಗ್ ಬೇಡ: ಮಾಲ್‌ಗಳು, ಪಬ್‌ಗಳು ಅಥವಾ ಇತರೆ ಸಾರ್ವಜನಿಕ ಸ್ಥಳಗಳ ಹೊರಗಡೆ ಜನರಿಗೆ ಕಾಣಿಸುವ ರೀತಿಯಲ್ಲಿ ದೊಡ್ಡ ಪರದೆ ಅಥವಾ ಸ್ಕ್ರೀನ್‌ಗಳನ್ನು ಹಾಕಿ ಪಂದ್ಯವನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಬೈಕ್ ರ್ಯಾಲಿ ಬೇಡ: ಪಂದ್ಯದ ನೆಪದಲ್ಲಿ ಬೈಕ್ ರ್ಯಾಲಿಗಳನ್ನು ನಡೆಸುವುದು, ಅತಿವೇಗದ ಚಾಲನೆ, ವೀಲಿಂಗ್‌ನಂತಹ ಸ್ಟಂಟ್‌ಗಳು, ಕರ್ಕಶ ಹಾರ್ನ್ ದುರುಪಯೋಗ ಮತ್ತು ರಸ್ತೆ ತಡೆ ಉಂಟುಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಸಂಚಾರ ಪೊಲೀಸರ ಸೂಚನೆ: ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚಾರ ಪೊಲೀಸರು ನೀಡುವ ಪ್ರತಿಯೊಂದು ಸಲಹೆ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.