newsics.com/ನ್ಯೂಸಿಕ್ಸ್
ಉತ್ತರ ಪ್ರದೇಶ : ವೈದ್ಯರ ಬೇಜವಾಬ್ದಾರಿತನದಿಂದಾಗಿ ಸಹೋದ್ಯೋಗಿಯ ತಾಯಿಯ ಕೈ ಕತ್ತರಿಸಿದ ಪ್ರಕರಣದಲ್ಲಿ ಆರೋಗ್ಯ ಇಲಾಖೆ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿರುವುದನ್ನು ಖಂಡಿಸಿ, ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಸೈನಿಕರು ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಕಾನ್ಪುರದಲ್ಲಿ ಭಾರಿ ಆತಂಕ ಹಾಗೂ ಕೋಲಾಹಲಕ್ಕೆ ಕಾರಣವಾಗಿದೆ.
ಶನಿವಾರ ಬೆಳಿಗ್ಗೆ ಐಟಿಬಿಪಿ ಕಮಾಂಡೆಂಟ್ ಗೌರವ್ ಪ್ರಸಾದ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಸೈನಿಕರು ಪೊಲೀಸ್ ಕಮಿಷನರ್ ಕಚೇರಿಗೆ ಲಗ್ಗೆ ಇಟ್ಟಿದ್ದರಿಂದ ಇಡೀ ಪೊಲೀಸ್ ಸಂಕೀರ್ಣವು ಕೆಲಕಾಲ ಮಿಲಿಟರಿ ಕಂಟೋನ್ಮೆಂಟ್ ಆಗಿ ಮಾರ್ಪಟ್ಟಿತ್ತು.
ಮಹಾರಾಜಪುರದ 32ನೇ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿರುವ ಐಟಿಬಿಪಿ ಕಾನ್ಸ್‌ಟೇಬಲ್ ವಿಕಾಸ್ ಸಿಂಗ್ ಅವರ ತಾಯಿ ನಿರ್ಮಲಾ ದೇವಿ ಅವರನ್ನು ಉಸಿರಾಟದ ತೊಂದರೆಯಿಂದಾಗಿ ಮೇ 13 ರಂದು ಟಾಟಾ ಮಿಲ್ಸ್ ರಸ್ತೆಯಲ್ಲಿರುವ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಅವರ ಕೈಗೆ ಗಂಭೀರ ಸೋಂಕು ತಗುಲಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ತಾಯಿ ನಿರ್ಮಲಾ ದೇವಿ ಅವರ ಸ್ಥಿತಿ ಅತ್ಯಂತ ಹದಗೆಟ್ಟಾಗ, ಅವರನ್ನು ತಕ್ಷಣ ಪ್ಯಾರಾಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಅಲ್ಲಿನ ವೈದ್ಯರು ಸೋಂಕು ಇಡೀ ದೇಹಕ್ಕೆ ಹರಡುವುದನ್ನು ತಡೆಯಲು ಮೇ 17 ರಂದು ಅವರ ಕೈಯನ್ನು ಕತ್ತರಿಸಿ ತೆಗೆದಿದ್ದಾರೆ.
ಈ ಘೋರ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾನ್ಸ್‌ಟೇಬಲ್ ವಿಕಾಸ್ ಸಿಂಗ್ ಅಧಿಕಾರಿಗಳ ಬಳಿ ಅಲೆದಾಡಿದರೂ ಯಾರೂ ಸ್ಪಂದಿಸಿರಲಿಲ್ಲ. ಇದರಿಂದ ಮನನೊಂದ ವಿಕಾಸ್ ಸಿಂಗ್, ಮೇ 20 ರಂದು ಆಸ್ಪತ್ರೆಯವರು ಕತ್ತರಿಸಿ ಕೊಟ್ಟಿದ್ದ ತನ್ನ ತಾಯಿಯ ಕೈಯನ್ನೇ ಪ್ಲಾಸ್ಟಿಕ್‌ನಲ್ಲಿ ಹಿಡಿದುಕೊಂಡು ನೇರವಾಗಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದು ಧರಣಿ ಕುಳಿತಿದ್ದರು. ಈ ಆಘಾತಕಾರಿ ದೃಶ್ಯ ಕಂಡು ಬೆಚ್ಚಿಬಿದ್ದ ಪೊಲೀಸ್ ಆಯುಕ್ತರು, ತಕ್ಷಣ ಪ್ರಕರಣದ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆಗೆ ಆದೇಶಿಸಿದ್ದರು.ಆದರೆ, ಆರೋಗ್ಯ ಇಲಾಖೆಯು ನೀಡಿದ ತನಿಖಾ ವರದಿಯು ದೋಷಿ ವೈದ್ಯರು ಮತ್ತು ಕೃಷ್ಣ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ರಕ್ಷಿಸುವ ರೀತಿಯಲ್ಲಿತ್ತು. ವರದಿಯಲ್ಲಿ ಸೋಂಕು ಹೇಗೆ ಹರಡಿತು ಎಂಬ ನಿಖರ ಕಾರಣ ನೀಡದೆ, ಕೇವಲ ಕಾಲ್ಪನಿಕ ಸಾಧ್ಯತೆಗಳನ್ನು ಉಲ್ಲೇಖಿಸಿ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಲಾಗಿತ್ತು.
ಇದರಿಂದ ಕೆರಳಿದ ಐಟಿಬಿಪಿ ಅಧಿಕಾರಿಗಳು ಹಾಗೂ ಸೈನಿಕರು ಶನಿವಾರ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಆಯುಕ್ತ ಡಾ. ವಿಪಿನ್ ಟಾಡಾ ಅವರನ್ನು ಭೇಟಿ ಮಾಡಿ ತೀವ್ರ ಪ್ರತಿಭಟನೆ ನಡೆಸಿದರು. ತನಿಖಾ ತಂಡದ ಪಕ್ಷಪಾತ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.
ಪ್ರಕರಣದ ಮರು ತನಿಖೆ ನಡೆಸಿ ಹೊಸ ವರದಿ ನೀಡುವಂತೆ ಮುಖ್ಯ ವೈದ್ಯಕೀಯ ಅಧಿಕಾರಿ ಅವರಿಗೆ ಸೂಚಿಸಲಾಗಿದೆ. ವೈದ್ಯಕೀಯ ನಿರ್ಲಕ್ಷ್ಯ ಸಾಬೀತಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂಒ ಅವರ ಬಳಿ ಮಾಧ್ಯಮಗಳು ಪ್ರಶ್ನೆ ಕೇಳಲು ಹೋದಾಗ, ಅವರು ಉತ್ತರ ನೀಡಲಾಗದೆ ಕ್ಯಾಮೆರಾಗಳಿಂದ ಮುಖ ಮುಚ್ಚಿಕೊಂಡು ಓಡಿಹೋಗಿರುವುದು ಸಾರ್ವಜನಿಕರ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ.ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಐಟಿಬಿಪಿ ಕಮಾಂಡೋ ಅಧಿಕಾರಿಗಳು, ಇದೊಂದು ಪೊಲೀಸ್ ಅಧಿಕಾರಿಗಳ ಜೊತೆಗಿನ ಪೂರ್ವ ನಿಯೋಜಿತ ಭೇಟಿ ಎಂದು ಹೇಳಿದ್ದಾರೆ.