newsics.com/ನ್ಯೂಸಿಕ್ಸ್
ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಲಾರಿ, ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಅತಿಥಿಗಳನ್ನು ಹೊತ್ತ ಟೆಂಪೋ ಹಾಗೂ ಬೈಕ್ ನಡುವೆ ಈ ದುರ್ಘಟನೆ ನಡೆದಿದೆ.
ಅಧಿಕಾರಿಗಳ ಪ್ರಕಾರ, ಕಾಸಾ ಉಪಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ಮೃತಪಟ್ಟರೆ, ದಹಾನು ನಗರದ ವೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದ್ದ ಇನ್ನಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ದಹಾನು ತಾಲೂಕಿನ ಬಾಪುಗಾಂವ್ನಿಂದ ಧನಿವಾರಿ ಗ್ರಾಮದಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ ಸಮಾರಂಭಕ್ಕೆ ಟೆಂಪೋದಲ್ಲಿ ಪ್ರಯಾಣಿಕರು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯಂತೆ, ಸುಮಾರು 40ಕ್ಕೂ ಹೆಚ್ಚು ಮಂದಿಯನ್ನು ಹೊತ್ತಿದ್ದ ಟೆಂಪೋ ಸುಮಾರು ಒಂದು ಕಿಲೋಮೀಟರ್ ಸುತ್ತು ತಪ್ಪಿಸಲು ಹೆದ್ದಾರಿಯ ತಪ್ಪು ದಿಕ್ಕಿನಲ್ಲಿ ಸಂಚರಿಸುತ್ತಿತ್ತು ಎನ್ನಲಾಗಿದೆ.
ಸಂಜೆ ಸುಮಾರು 4 ಗಂಟೆ ವೇಳೆಗೆ ಗುಜರಾತ್ನಿಂದ ಮುಂಬೈ ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿ ಗ್ರಾಮಾಂತರ ಪ್ರದೇಶದ ಬಳಿ ನಿಯಂತ್ರಣ ತಪ್ಪಿ, ಅದರ ಕಂಟೈನರ್ ಭಾಗ ಟೆಂಪೋದ ಎಡಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಕೂಡ ಅಪಘಾತಕ್ಕೆ ಸಿಲುಕಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.