newsics.com/ನ್ಯೂಸಿಕ್ಸ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಕಮಲದ ಹೂವಿನ ಆಕೃತಿಯಲ್ಲಿ ನಿರ್ಮಾಣ ಮಾಡಲಾಗಿರುವ ಭವ್ಯವಾದ ‘ಧ್ಯಾನ ಮಂದಿರ’ವನ್ನು ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಪ್ರಧಾನಿ ಮೋದಿಗೆ ಆರ್ಟ್ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದರು.
ತಮ್ಮ ಭಾಷಣದುದ್ದಕ್ಕೂ ‘ಸೇವೆ’ಯ ಮಹತ್ವವನ್ನು ಎತ್ತಿ ಉಲ್ಲೇಖಿಸಿದ ಮೋದಿ, ‘ನಮ್ಮಲ್ಲಿ ಸೇವೆ ಎನ್ನುವುದು ಪರಮ ಧರ್ಮ. ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರತಿ ಕಾರ್ಯಕರ್ತನಲ್ಲೂ ಸೇವಾ ಭಾವನೆ ಎದ್ದು ಕಾಣುತ್ತಿದೆ. ಗುರೂಜಿ ಅವರು ಕಳೆದ 45 ವರ್ಷಗಳ ಹಿಂದೆ ಬಿತ್ತಿದ ಬೀಜ ಇಂದು ವಿಶಾಲವಾದ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ವೃಕ್ಷದ ಸಾವಿರಾರು ಶಾಖೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಬದುಕನ್ನು ಸುಂದರಗೊಳಿಸುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.