newsics.com/ನ್ಯೂಸಿಕ್ಸ್
ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆ ಮಹಿಳೆಯನ್ನು ಹಿಂದಿನಿಂದ ಬಂದು ತಬ್ಬಿಕೊಂಡಿದ್ದಲ್ಲದೇ ಪ್ರಶ್ನೆ ಮಾಡಿದ್ದಕ್ಕೆ ಆಕೆಯ ಪತಿ ಮೇಲೆ ಮಚ್ಚು, ದೋಸೆ ತವಾದಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪುಟ್ಟರಾಜು ಎಂಬಾತ ಪಕ್ಕದ ಮನೆಯ ಮಹಿಳೆಯನ್ನು ಹಿಂದಿನಿಂದ ಬಂದು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ಕಂಡು ಮಹಿಳೆಯ ಪತಿ ನಂದೀಶ್ ಪುಟ್ಟರಾಜುನನ್ನು ಬೈದು ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡ ಆತ ನಂದೀಶ್ ಮೇಲೆ ಮಚ್ಚು, ದೋಸೆ ತವಾದಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಹಲ್ಲೆಗೊಳಗಾದ ನಂದೀಶ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರುಳನ ಕುಚೇಷ್ಟೆಗೆ ವಠಾರದ ಜನರು ಬೆಚ್ಚಿ ಬಿದ್ದಿದ್ದಾರೆ.
ನಂದೀಶ್ ಹಾಗೂ ಪತ್ನಿ ಶಂಕರಪುರದ ರಂಗರಾವ್ ರಸ್ತೆಯಲ್ಲಿನ ಗಿರೀಶ್ ಜೈನ್ ಅವರ ವಠಾರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು, ಅದೇ ವಠಾರದ ಮತ್ತೊಂದು ಮನೆಯಲ್ಲಿ ಪುಟ್ಟರಾಜು ಹಾಗೂ ಆತನ ಪತ್ನಿ ಕೂಡ ವಾಸವಾಗಿದ್ದಾರೆ. ನಂದೀಶ್ ಪತ್ನಿ ಪಾತ್ರೆ ತೊಳೆಯುತ್ತಿದ್ದಾಗ ಯಾವಾಗಲೂ ತನ್ನ ಮನೆ ಬಾಗಿಲನ್ನು ಅರ್ಧಕ್ಕೆ ತೆಗೆದು ಪುಟ್ಟರಾಜು ಇಣುಕಿ ನೋಡುತ್ತಿದ್ದನಂತೆ.
ಅದೇ ರೀತಿ ಕಳೆದ ರಾತ್ರಿ ನಂದೀಶ್ ಪತ್ನಿ ಪಾತ್ರೆ ತೊಳೆಯುವಾಗ ಪುಟ್ಟರಾಜು ಯಾರಿಗೂ ಗೊತ್ತಾಗದಂತೆ ಹಿಂದಿನಿಂದ ಬಂದು ತಬ್ಬಿಕೊಂಡಿದ್ದಾನೆ. ಮಹಿಳೆ ಗಾಬರಿಯಿಂದ ಕಿರುಚಿದ್ದಾರೆ. ಪುಟ್ಟರಾಜು ತನ್ನ ಪತ್ನಿಯನ್ನು ತಬ್ಬಿಕೊಂಡಿದ್ದನ್ನು ಕಂಡ ನಂದೀಶ್ ಎಳನೀರು ಕೊಚ್ಚುವ ಮಚ್ಚು ಹಿಡಿದುಕೊಂಡು ಪುಟ್ಟರಾಜು ಬಳಿ ಹೋಗಿ ಬೈದಿದ್ದಾರೆ.
ಈ ವೇಳೆ ನಂದೀಶ್ ಹಾಗೂ ಪುಟ್ಟರಾಜು ನಡುವೆ ಮಾತಿಗೆ ಮಾಅತು ಬೆಳೆದು ಗಲಾಟೆಯಾಗಿದೆ. ಜಗಳದಲ್ಲಿ ಪುಟ್ಟರಾಜು ನಂದೀಶ್ ಕೈಲಿದ್ದ ಮಚ್ಚು ಕಸಿದುಕೊಂಡು ಮನಬಂದಂತೆ ನಂದೀಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಸಾಲದ್ದಕ್ಕೆ ಅಲ್ಲಿಯೇ ಇದ್ದ ದೋಸೆ ತವಾ ಎತ್ತಿಕೊಂಡು ಅದರಿಂದಲೂ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ನಂದೀಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಂಕರಪುರ ಪೊಲೀಸ್ ಠಾಣೆಯಲ್ಲಿ ನಂದೀಶ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪುಟ್ಟರಾಜುನನ್ನು ಬಂಧಿಸಿದ್ದಾರೆ.