ಮದುವೆಯಾಗುವುದಾಗಿ ನಂಬಿಸಿದ್ದ ಯುವಕನೊಬ್ಬ ಯುವತಿಗೆ ಕೈಕೊಟ್ಟಿದ್ದಲ್ಲದೇ ಬ್ಲ್ಯಾಕ್ ಮೇಲ್ ಮಾಡಿ 19 ಲಕ್ಷ ರೂಪಾಯಿ ದೋಚಿರುವ ಘಟನೆಬೆಳಗಾವಿಯ ಶಹಾಪುರದಲ್ಲಿ ನಡೆದಿದೆ.
ಬೆಳಗಾವಿಯ ಮಾಧವಾ ಕಾಲೋನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಎಂಬಾತ ಈ ರೀತಿ ಕೃತ್ಯವೆಸಗಿದ್ದಾನೆ.
ಫೇಸ್‌ಬುಕ್ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ ಈತ, ಬಳಿಕ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ, ಮದುವೆಯಾಗುವುದಾಗಿ ನಂಬಿಸಿದ್ದಾನೆ. ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಯುವತಿಗೆ ತಿಳಿಯದಂತೆ ಖಾಸಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಯುವತಿಯಿಂದ ಹಂತ ಹಂತವಾಗಿ 19 ಲಕ್ಷ ರೂಪಾಯಿ ಹಣ ದೋಚಿದ್ದಾನೆ. ಸಂತ್ರಸ್ತೆಯ ತಾಯಿಯ ಚಿನ್ನ ಹಾಗೂ ತಂದೆಯ ಎಫ್‌ಡಿ ಹಣವನ್ನೂ ಈತ ಲೂಟಿ ಮಾಡಿದ್ದಾನೆ.
ಸುಮಾರು 150 ಗ್ರಾಂ ಚಿನ್ನಾಭರಣ ಹಾಗೂ 19 ಲಕ್ಷ ರೂಪಾಯಿಗಳನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾನಂತೆ. ಅಷ್ಟೇ ಅಲ್ಲದೆ, ಆರೋಪಿ ಯುವಕನ ತಾಯಿ 3 ಕೋಟಿ ರೂಪಾಯಿ ಕೊಟ್ಟರೆ ಮಾತ್ರ ಮದುವೆ ಮಾಡಿಕೊಳ್ಳುತ್ತೇವೆ ಎಂದು ಬೇಡಿಕೆ ಇಟ್ಟಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಶಹಾಪುರ ಠಾಣೆಯಲ್ಲಿ ದೂರು ನೀಡಿದ್ದೇನೆ. ಆದರೆ ಈ ಪ್ರಕರಣದಲ್ಲಿ ಶಹಾಪುರ ಠಾಣೆ ಪೊಲೀಸರ ನಡೆ ಸಂಶಯಾಸ್ಪದವಾಗಿದೆ.ಬ್ಯಾಂಕ್‌ನಿಂದ ರಿಕವರಿ ಮಾಡಿದ್ದ ಚಿನ್ನವನ್ನು ಮರಳಿ ಯುವಕನಿಗೇ ಕೊಟ್ಟು ಕಳುಹಿಸಿದ್ದಾರೆ ಹಾಗೂ ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ನೊಂದ ಯುವತಿ ನ್ಯಾಯಕ್ಕಾಗಿ ಇಂದು ಕಮಿಷನರ್ ಕಚೇರಿಗೆ ಆಗಮಿಸಿ ದೂರು ನೀಡಿದ್ದು, ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ.
ಸ್ಕೂಟಿಗೆ ಡಿಕ್ಕಿ: ದಂಪತಿಯನ್ನು 5 ಕಿಮೀ ಎಳೆದೊಯ್ದ ಮಿನಿ ಟ್ರಕ್, ಪತ್ನಿ ಸಾವು