newsics.com
ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಅಗ್ರಮಾನ್ಯ ಕಲಾವಿದ, ಯಕ್ಷಗುರು ದಶಾವತಾರಿ ಸೂರಿಕುಮೇರಿ ಕೆ. ಗೋವಿಂದ ಭಟ್ ಅವರು ಶುಕ್ರವಾರ ರಾತ್ರಿ ವಿಧಿವಶರಾದರು.
ತೀರ್ಥಹಳ್ಳಿಯ ತಮ್ಮ ಪುತ್ರನ ನಿವಾಸದಲ್ಲಿ ಕೊನೆಯುಸಿರೆಳೆದ ಅವರಿಗೆ 90 ವರ್ಷ ವಯಸ್ಸಾಗಿತ್ತು. ಗೋವಿಂದ ಭಟ್ ಅವರಿಗೆ ಪತ್ನಿ, ಮೂವರು ಪುತ್ರರಿದ್ದಾರೆ.
ಯಕ್ಷಗಾನದ ತೆಂಕುತಿಟ್ಟು ರಂಗಭೂಮಿಯ ನಡೆದಾಡುವ ವಿಶ್ವಕೋಶ, ಅಭಿನಯ ಚತುರ ಎಂದೇ ಖ್ಯಾತರಾಗಿದ್ದ ಗೋವಿಂದ ಭಟ್ 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಸೂರಿಕುಮೇರಿಯಲ್ಲಿ ಮಾರ್ಚ್ 22, 1938 ರಂದು ಇವರು ಜನಿಸಿದರು. ತಂದೆ ಶಿವರಾಮ ಭಟ್ಟರು ಮತ್ತು ತಾಯಿ ಪಾರ್ವತಿ ಅಮ್ಮ. ಕಡು ಬಡತನದ ನಡುವೆಯೂ ಏಳನೇ ತರಗತಿಯವರಿಗೆ ಇವರು ವಿದ್ಯಾಭ್ಯಾಸ ಮಾಡಿದರು. ಯಕ್ಷಗಾನದ ಮೇಲಿದ್ದ ಅಪಾರ ಪ್ರೀತಿಯಿಂದಾಗಿ 1951ರಲ್ಲಿ ಕೇವಲ 13ನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿ ರಂಗಪ್ರವೇಶ ಮಾಡಿದರು.
ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಸತತ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅಪರೂಪದ ಕಲಾವಿದ. ಮೇಳದ ಶಿಸ್ತು ಮತ್ತು ಸಂಪ್ರದಾಯದ ಕಾವಲುಗಾರನಂತೆ ಇವರು ಕಾರ್ಯನಿರ್ವಹಿಸಿದ್ದರು.
ಹದಿಹರೆಯದಿಂದ ಹಿಡಿದು ಇಳಿವಯಸ್ಸಿನವರೆಗೂ ಯಕ್ಷಗಾನ ರಂಗದ ಮೇಲೆ ಸಕ್ರಿಯರಾಗಿದ್ದ ಇವರು, ಯಕ್ಷಗಾನದ ಏರಿಳಿತಗಳನ್ನು ಹತ್ತಿರದಿಂದ ಕಂಡವರು. ‘ದಶಾವತಾರಿ’ ಎಂದೇ ಕರೆಯಲ್ಪಡುತ್ತಿದ್ದ ಇವರು ಯಾವುದೇ ವೇಷಕ್ಕಾದರೂ ಸೈ ಎನಿಸಿಕೊಳ್ಳುತ್ತಿದ್ದರು.
ಇವರ ಪಾತ್ರಗಳಲ್ಲಿನ ಗಾಂಭೀರ್ಯ ಮತ್ತು ಸಂಭಾಷಣಾ ಚತುರತೆ ಅದ್ವಿತೀಯವಾಗಿತ್ತು. ಅರ್ಜುನ, ಭೀಷ್ಮ, ಕರ್ಣ, ಕೌರವ, ದಶರಥ, ವಾಲಿಯಂತಹ ಪೌರಾಣಿಕ ಪಾತ್ರಗಳಿಗೆ ಹೊಸ ಆಯಾಮ ನೀಡಿದವರು ಗೋವಿಂದ ಭಟ್ಟರು . ಇವರ ಮುಖಭಾವಗಳಲ್ಲಿ ನವರಸಗಳು ಲಾಸ್ಯವಾಡುತ್ತಿದ್ದವು. ವಿಶೇಷವಾಗಿ ವೀರ ಮತ್ತು ಕರುಣಾ ರಸದ ಪಾತ್ರಗಳಲ್ಲಿ ಇವರನ್ನು ಮೀರಿಸುವವರಿಲ್ಲ ಎಂಬ ಮಾತು ಕಲಾಭಿಮಾನಿಗಳಲ್ಲಿದೆ.
ಇವರ ಸಾಧನೆಗೆ 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ದಕ್ಕಿದೆ. ಅಭಿಮಾನಿಗಳು ಇವರ ಕಲಾ ಜೀವನವನ್ನು ದಾಖಲಿಸಲು ‘ಸವ್ಯಸಾಚಿ’ ಎಂಬ ಸ್ಮರಣ ಸಂಚಿಕೆಯನ್ನು ಅರ್ಪಿಸಿದ್ದರು.
ಯಕ್ಷರಂಗದಲ್ಲಿ ಕಲಾವಿದರಾಗಿ, ತಾಳಮದ್ದಳೆ ಕ್ಷೇತ್ರದ ಅದ್ಭುತ ಅರ್ಥಧಾರಿಯಾಗಿ ಗಮನ ಸೆಳೆದಿದ್ದ ಗೋವಿಂದ ಭಟ್ ಅವರು ಅದೆಷ್ಟೋ ಕಲಾವಿದರಿಗೆ ಗುರುಗಳಾಗಿ ಮಾರ್ಗದರ್ಶನ ತೋರಿದವರು.
ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಎಂದೇ ಇವರು ಪ್ರಸಿದ್ಧರಾಗಿದ್ದರು. ಜತೆಗೆ ಇವರು ತೆಂಕುತಿಟ್ಟು ಯಕ್ಷಗಾನಕ್ಕೆ ಎರಡನೇ ರಾಷ್ಟ್ರಪ್ರಶಸ್ತಿ ತಂದು ಕೊಟ್ಟವರು. ತಮ್ಮ ಯಕ್ಷತಿರುಗಾಟದ ಅನುಭವ ಕಥನವನ್ನು ಇವರು ‘ಎಪ್ಪತ್ತು ತಿರುಗಾಟಗಳು’ ಎಂಬ ಕೃತಿಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಟ್ರಂಪ್ಗೆ ಮುಖಭಂಗ : ಅಮೆರಿಕದ ಯುದ್ಧ ವಿಮಾನಗಳನ್ನು ಇಳಿಸಲು ಅವಕಾಶ ನಿರಾಕರಿಸಿದ ಶ್ರೀಲಂಕಾ
ರೇಬಿಸ್ ಕಾಯಿಲೆಯಿಂದ ನಾಯಿಯಂತೆ ಬೊಗಳುತ್ತಿರುವ ಬಾಲಕ..! ವೈರಲ್ ವಿಡಿಯೋ ನೋಡಿ