Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಾಗಲಕೋಟೆ: ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ ಹಲ್ಲೆ ನಡೆಸಿ ರಾಕ್ಷಸಿ ಕೃತ್ಯ ಮೆರೆದಿರುವಂತಹ ಘಟನೆ ಬಾಗಲಕೋಟೆಯ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ ನಡೆದಿದೆ.
ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬಾಲಕನ ಮೇಲೆ ರಾಕ್ಷಸಿ ಕೃತ್ಯ ನಡೆದಿದೆ. ಬಾಲಕನ ಮೇಲೆ ಶಿಕ್ಷಕ ಹಾಗೂ ಆತನ ಪತ್ನಿ ಇಬ್ಬರೂ ಸೇರಿ ಬೆಲ್ಟ್ ಹಾಗೂ ಪ್ಲಾಸ್ಟಿಕ್ ಪೈಪ್‌ನಿಂದ ಹೊಡೆದು, ಮೃಗದ ರೀತಿ ವರ್ತನೆ ಮಾಡಿದ್ದಾರೆ.
ಈ ಶಾಲೆಯಲ್ಲಿ ಶಿಕ್ಷಕನಾಗಿರುವ ಅಕ್ಷಯ್ ಇಂದುಲ್ಕರ್ ಹಾಗೂ ಆತನ ಪತ್ನಿ ಸೇರಿ ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಬಾಲಕ ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ ಎಸಗಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ರು. ಈ ವೇಳೆ ಮಾಧ್ಯಮಗಳ ಮುಂದೆ ನಾವು ಬಾಲಕನಿಗೆ ಏನೂ ಮಾಡಿಲ್ಲ ಎಂದು ದಂಪತಿ ವಾದಿಸಿದ್ರು. ಮಕ್ಕಳೇ ಕಣ್ಣಿಗೆ ಖಾರದಪುಡಿ ಎರಚಿಕೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿದ್ರು.
ಬಳಿಕ ಹಲ್ಲೆ ಮಾಡಿದ ಅಕ್ಷಯ್ ಹಾಗೂ ಆತನ ಪತ್ನಿ ಆನಂದಿ ಎಂಬುವರನ್ನು ಠಾಣೆಗೆ ಕರೆತಂದ ಪೊಲೀಸರು, ವಿಚಾರಣೆ ನಡೆಸಿದ್ರು. ಇತ್ತ ಘಟನೆಯಿಂದ ಗಾಬರಿಗೊಳಗಾದ ಪೋಷಕರು ವಸತಿ ಶಾಲೆಯಿಂದ ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ.
ಈ ಘಟನೆ ಸಂಬಂಧ ಮಕ್ಕಳ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆ ಈ ಬಗ್ಗೆ ಆಘಾತ ವ್ಯಕ್ತಪಡಿಸಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಘಟನೆಯನ್ನು ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ವಸತಿ ಶಾಲೆ ಮುಚ್ಚಿಸೋಕೆ ಬಾಗಲಕೋಟೆಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆ ಮುಂದಾಗಿದೆ. ಈ ಶಾಲೆ ನಡೆಸಲು ಅನುಮತಿ ಇತ್ತೋ, ಇಲ್ಲವೋ ಎನ್ನುವ ಬಗ್ಗೆ ಪರಿಶೀಲಿಸಿ, ವಸತಿ ಶಾಲೆಯಲ್ಲಿರುವ ಮಕ್ಕಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ನಿರ್ಧಾರ ಮಾಡಿದೆ.