Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿದ್ದ ಗಿಳಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರಿನ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್ನಲ್ಲಿ ಈ ದುರಂತ ಸಂಭವಿಸಿದ್ದು, ಮೃತನನ್ನು ಅರುಣ್ ಕುಮಾರ್ (32) ಎಂದು ಗುರುತಿಸಲಾಗಿದೆ.
ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅರುಣ್ ಅವರಿಗೆ ಸೇರಿದ ವಿದೇಶದಿಂದ ತರಿಸಿದ, ಬರೋಬ್ಬರಿ 2 ಲಕ್ಷ ರೂ. ಬೆಲೆಯ ಗಿಳಿ ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಗಿಳಿಯನ್ನು ಅಲ್ಲಿಂದ ರಕ್ಷಿಸಲು ಹೋಗಿ ಯುವಕನೇ ವಿದ್ಯುತ್ ಶಾಕ್‌ಗೆ ಗುರಿಯಾಗಿ ಮೃತಪಟ್ಟಿದ್ದಾರೆ. 66 ಸಾವಿರ ಕೆವಿ ವಿದ್ಯುತ್ ವೈರ್ ನಿಂದ ಹೊಡೆದ ಶಾಕ್‌ಗೆ ಅರುಣ್ ಕಾಂಪೌಂಡ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಅರುಣ್ ಅವರ ಗಿಳಿ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್ ಒಳಭಾಗದಲ್ಲಿರುವ ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು. ಇದನ್ನು ನೋಡಿದ ಅರುಣ್ ಕುಮಾರ್, ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್ ಮೂಲಕ ಅದನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ವಿದ್ಯುತ್ ವೈರ್‌ಗೆ ಪೈಪ್ ತಗುಲಿ ಶಾಕ್ ಹೊಡೆದಿದೆ ಎನ್ನಲಾಗಿದೆ.
ಸ್ಥಳಕ್ಕೆ ಬೆಸ್ಕಾಂ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಾರ್ಟ್‌ಮೆಂಟ್ ಒಳಗೆ 66 ಸಾವಿರ ಕೆವಿ ಸಾಮರ್ಥ್ಯದ ವೈರ್‌ಗಳು ಇರುವುದಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಗ್ರ ತನಿಖೆ ನಡೆಯುವಂತೆ ಆಗ್ರಹಿಸಿದ್ದಾರೆ.