Subscribe NewsicsKannada/YouTube
newsics.com
ಮೈಸೂರು: ವಿಶ್ವವಿಖ್ಯಾತ ಮೈಸೂರು ಜಂಬೂಸವಾರಿ ಮೆರವಣಿಗೆಯನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡು, ತಮ್ಮ ಸ್ಮೃತಿ ಪಟಲದಲ್ಲಿ ದಾಖಲಿಸಿಕೊಂಡರು.
ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಚಿನ್ನದ ವಿರಾಜಮಾನಳಾಗಿದ್ದ ಅಂಬಾರಿಯನ್ನು ಹೊತ್ತು ಮೈಸೂರಿನ ರಾಜ ಬೀದಿಯಲ್ಲಿ ವೈಭವದಿಂದ ಸಾಗಿದ ದಸರಾದ ವಿಜಯದಶಮಿ ಮೆರವಣಿಗೆಯನ್ನು ದೂರದೂರುಗಳಿಂದ ಬಂದ ಪ್ರವಾಸಿಗರು, ಸ್ಥಳೀಯರು ನೂಕುನುಗ್ಗಲನ್ನೂ ಲೆಕ್ಕಿಸದೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡರು.
ತಮ್ಮ ಜೀವನಮಾನದಲ್ಲಿ ಒಮ್ಮೆಯಾದರೂ ದಸರಾ ನೋಡಿದ ಖುಷಿಯನ್ನು ಸಂಭ್ರಮಿಸಿ, ತಮ್ಮ ಜೀವನದ ಪುಟದಲ್ಲಿ ದಾಖಲಿಸಿಕೊಂಡರು.
ರಾಜ್ಯವೂ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ರಾಜಪರಂಪರೆ ನೆನಪಿಸುವ ಜಂಬೂಸವಾರಿಯ ವೈಭವನ್ನು ಸಾಕ್ಷೀಕರಿಸಿದರು.
ಹೂವುಗಳಿಂದ ಅಲಂಕೃತಳಾಗಿ, ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಾ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಸಾಗಿದ ದುಷ್ಟ ಸಂಹಾರಿಣಿ, ಶಿಷ್ಟ ರಕ್ಷಕಿಯಾದ ನಾಡದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿಯನ್ನು ನೋಡಿ, ಶ್ರದ್ಧಾ ಭಕ್ತಿಯಿಂದ ನಮಿಸಿ, ಭಾವಪೂರ್ಣರಾಗಿ ಧನ್ಯತೆ ಮೆರೆದರು.
ಸಂಪುಟ ಸಹದ್ಯೋಗಿಗಳೊಂದಿಗೆ ಐರಾವತ ಬಸ್ನಲ್ಲಿ ಅರಮನೆ ಬಲರಾಮ ದ್ವಾರಕ್ಕೆ ಬಂದಿಳಿದ ಸಿಎಂ ಸಿದ್ದರಾಮಯ್ಯ, ಮಧ್ಯಾಹ್ನ 1ರಿಂದ 1:18ರವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ನಂದೀಧ್ವಜಕ್ಕೆ ಸಾಂಪ್ರದಾಯಿಕ ಪ್ರಜೆ ಸಲ್ಲಿಸಿದರು. ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಿವರಾಜ್ ಎಸ್.ತಂಗಡಗಿ, ಶಾಸಕರು ಸಾಥ್ ನೀಡಿದರು.
ಬಳಿಕ ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ಜಾನಪದ ಕಲಾವಿದರ ತಂಡಗಳ ಆಕರ್ಷಕ ಮೆರವಣಿಗೆ ವಿಧ್ಯುಕ್ತವಾಗಿ ಆರಂಭವಾಯಿತು.
ನಂದೀಧ್ವಜ, ವೀರಗಾಸೆ ಸಾಗುತ್ತಿದ್ದಂತೆ ಮೈಸೂರು ಅರಮನೆಯಿಂದ ಹೊರಟ ನಿಶಾನೆ ಧನಂಜಯ ಆನೆ ಜಂಬೂಸವಾರಿ ಕುರುಹು ಹೊತ್ತು ಸಾಗಿದ. ನೌಪತ್ ಆನೆಯಾಗಿ ಗೋಪಿ ಸಾಗಿದನು. ಇದರ ಜತೆಗೆ ಅಲಂಕೃತಗೊAಡಿದ್ದ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿ ಆನೆಗಳು ಸಾಗಿತು. ನಂತರ, 59 ಸ್ತಬ್ಧಚಿತ್ರಗಳು, 75ಕ್ಕೂ ಜಾನಪದ ಕಲಾಪ್ರಕಾರಗಳ ಕಲಾವಿದರು ನೃತ್ಯ ಪ್ರದರ್ಶಿಸಿ ಸಾಗಿದರು.
2 ನಿಮಿಷ ಮುಂಚಿತವಾಗಿ ಪುಷ್ಪಾರ್ಚನೆ; ಸಂಜೆ 4:42ರಿಂದ 5:06ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಸಮಯಕ್ಕೆ ಚಿನ್ನದ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಬೇಕಾಗಿತ್ತು. ಆದರೆ ಮುಹೂರ್ತಕ್ಕೆ ಇನ್ನೂ ಎರಡು ನಿಮಿಷ ಬಾಕಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿನ್ನದ ಅಂಬಾರಿಯಲ್ಲಿರಿಸಿದ್ದ ಚಾಮುಂಡೇಶ್ವರಿದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಶಿವರಾಜ್ ಎಸ್.ತಂಗಡಗಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್ ಉಪಸ್ಥಿತರಿದ್ದು, ಸಾಂಪ್ರದಾಯಿಕವಾಗಿ ನಾಡಿನ ಅಧಿದೇವತೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಅಲ್ಲಿಂದ ರಾಜಗಾಂಭೀರದಿAದ ಹೆಜ್ಜೆ ಹಾಕಲು ಅಣಿಯಾಗುತ್ತಿದ್ದಂತೆ ಆತನ ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ ನಿಲ್ಲುತ್ತಿದ್ದಂತೆ ಅಶ್ವಾರೋಹಿದಳದ ಕಮಾಂಡೆಂಟ್ ಕೆ.ಎಸ್.ಸುರೇಶ್ ಅವರು ಪಥ ಸಂಚಲನಕ್ಕೆ ಗಣ್ಯರಿಂದ ಅನುಮತಿ ಕೋರಿದರು.
ವಿಜಯದ ಸಂಕೇತವಾಗಿ ಅರಮನೆಗೆ ಹೊಂದಿಕೊಂಡಂತೆ ಇರುವ ಕೋಟೆ ವಾರಮ್ಮನದೇವಸ್ಥಾನದ ಬಳಿ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಾಯಿತು. ನಂತರ ಮೈಸೂರು ನಗರ ಪೊಲೀಸ್ ವಾದ್ಯವೃಂದದವರು ರಾಷ್ಟಗೀತೆ ನುಡಿಸಿ, ಗೌರವ ವಂದನೆ ಸಲ್ಲಿಸಿದರು. ಬಳಿಕ ಗಣ್ಯರು ಚಾಮುಂಡೇಶ್ವರಿ ದೇವಿಗೆ ಗಣ್ಯರು ನಮನ ಸಲ್ಲಿಸಿ ತಮ್ಮ ಗೌರವವನ್ನು ಅರ್ಪಿಸಿದರು.
ಅಭಿಮನ್ಯು ಹಾಗೂ ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪ ಸೊಂಡಿಲೆತ್ತಿ ಸೆಲ್ಯೂಟ್ ಹೊಡೆದು ಗಮನ ಸೆಳೆದವು. ಬಳಿಕ ಅಶ್ವಾರೋಹಿ ದಳದ ಎಸಿಪಿ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿಯನ್ನು ತೆಗೆದುಕೊಂಡು ಹೋಗಲು ಅನುಮತಿ ಪಡೆದರು.
ಕೆಎಸ್ಆರ್ಪಿ ತುಕಡಿ, ಡಿಎಆರ್, ಆರ್ಪಿಎಫ್,ಮೌಂಟೆಡ್ ತುಕಡಿ, ಕರ್ನಾಟಕ ಪೊಲೀಸ್ ಅಕಾಡೆಮಿ ತಂಡ, ಆಕರ್ಷಕ ಪಥ ಸಂಚಲನ ನಡೆಸುತ್ತಾ ಮೆರವಣಿಗೆಯಲ್ಲಿ ಸಾಗಿದವು.
ದೀಪಾಲಂಕಾರದಲ್ಲಿ ಸಾಗಿದ ಅಭಿಮನ್ಯು
ಸಂಜೆಯಾಗುತ್ತಿದ್ದಂತೆ ದೀಪಗಳನ್ನು ಬೆಳಗಲಾಯಿತು. ಝಗಮಗಿಸುವ ಬೆಳಕಿನ ಮಧ್ಯೆ ಅಭಿಮನ್ಯು ಅಂಬಾರಿಯನ್ನು ಹೊತ್ತು ಸುರಕ್ಷಿತವಾಗಿ ಬನ್ನಿಮಂಟಪಕ್ಕೆ ತೆರಳಿ, ತನಗೆ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರನಾದ.
ಜಂಬೂಸವಾರಿ ಮೆರವಣಿಗೆ ಯಾವುದೇ ಅಡೆತಡೆಯಿಲ್ಲದೆ, ಸುಗಮವಾಗಿ ಸಾಗಿ ಸಮಾಪ್ತಿಯಾಗಿದ್ದಕ್ಕೆ ಲಕ್ಷಾಂತರ ಮಂದಿ ಸಂತಸ ವ್ಯಕ್ತಪಡಿಸಿದರು. ದಸರಾ ಯಶಸ್ವಿಗೊಳಿಸಲು ಹಗಲು, ರಾತ್ರಿ ಎನ್ನದೆ ಶ್ರಮಿಸಿದ್ದ ಅಧಿಕಾರಿಗಳು ಸಮಾಧಾನದ ನಿಟ್ಟಿಸಿರು ಬಿಟ್ಟರು. ಬಳಿಕ ಕ್ರೇನ್ ಮೂಲಕ ಅಭಿಮನ್ಯು ಬೆನ್ನಿನಿಂದ ಚಿನ್ನದ ಅಂಬಾರಿಯನ್ನು ಕೆಳಕ್ಕೆ ಇಳಿಸಿ, ಅದನ್ನು ಬಿಗಿ ಭದ್ರತೆಯಲ್ಲಿ ವಾಪಸ್ ಅರಮನೆಗೆ ತರಲಾಯಿತು. ಗಜಪಡೆಗಳು ಕೂಡ ವಾಪಸ್ ಬಂದವು.
ಮಳೆ ಆತಂಕ ದೂರ
ಜಂಬೂಸವಾರಿ ಆರಂಭವಾಗುತ್ತಿದ್ದಂತೆ ಮಳೆ ಆರಂಭವಾಯಿತು. ತುಂತುರು ಮಳೆ ಬೀಳುತ್ತಿದ್ದಂತೆ ಎಲ್ಲರಿಗೂ ಆತಂಕ ಶುರುವಾಗಿತ್ತು. ಮಳೆಯಲ್ಲಿಯೇ ಮೆರವಣಿಗೆ ಸಾಗಿತು. ಆದರೆ ವರುಣ ದೇವ ಮತ್ತೆ ತೊಂದರೆ ಕೊಡಲಿಲ್ಲ.
ಜಂಬೂಸವಾರಿಗೆ ಪೊಲೀಸ್ ಸರ್ಪಗಾವಲು, ದಸರಾ ಬಂದೋಬಸ್ತ್ಗೆ 7 ಸಾವಿರ ಪೊಲೀಸರ ನಿಯೋಜನೆ
ಮನೆಗೆಲಸದಾಕೆಯ ಎದುರೇ ಓನರ್ ಬೆತ್ತಲೆ ಓಡಾಟ! ಬೆಚ್ಚಿಬಿದ್ದ ಮಹಿಳೆ ವಿರುದ್ಧವೇ ದೂರು ನೀಡಿ ಸಿಕ್ಕಿಬಿದ್ದ ಮನೆ ಮಾಲೀಕ
ಕಾಳಸಂತೆಯಲ್ಲಿ ದಸರಾ ಪಾಸ್ ಮಾರಾಟ; ಎಲ್ಲೆಡೆ ಜನರ ಪರದಾಟ, ನೂಕುನುಗ್ಗಲು, ಯುವತಿ ಅಸ್ವಸ್ಥ, ಓರ್ವ ಪೊಲೀಸ್ ವಶಕ್ಕೆ