Subscribe NewsicsKannada/YouTube
newsics.com
ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು, ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಮಂಗಳವಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದರು.
ವಿಚಾರಣಾ ನೋಟಿಸ್ ಜಾರಿ ಹಿನ್ನೆಲೆಯಲ್ಲಿ, ತನಿಖಾಧಿಕಾರಿ ಡಿವೈಎಸ್ಪಿ ಸತೀಶ್‌ಕುಮಾರ್ ಅವರ ಮುಂದೆ ಜಮೀರ್ ಅಹಮದ್ ದಾಖಲೆಗಳೊಂದಿಗೆ ಹಾಜರಾಗಿದ್ದರು.
ಸುಮಾರು ಎರಡು ಗಂಟೆ ಕಾಲ ನಡೆದ ವಿಚಾರಣೆಯಲ್ಲಿ, ಜಮೀರ್ ಅವರ ಆಸ್ತಿ ಮತ್ತು ಹಣಕಾಸು ವ್ಯವಹಾರಗಳ ಕುರಿತು ಹೇಳಿಕೆಗಳನ್ನು ದಾಖಲಿಸಲಾಗಿದೆ.
ಅಗತ್ಯವಿದ್ದರೆ, ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಜಮೀರ್ ಅಹಮದ್ ವಿರುದ್ಧದ ಪ್ರಕರಣಕ್ಕೆ ವೇಗ ನೀಡಿರುವ ತನಿಖಾಧಿಕಾರಿ, ಇತ್ತೀಚೆಗೆ ಜಮೀರ್ ಜತೆ ಹಣಕಾಸು ವ್ಯವಹಾರದ ನಂಟು ಹೊಂದಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಉದ್ಯಮಿ ಕೆಜಿಎಫ್ ಬಾಬು ಅವರನ್ನು ಕೂಡ ವಿಚಾರಣೆ ನಡೆಸಿದ್ದಾರೆ. ಸಚಿವ ದಿನೇಶ್ ಗುಂಡೂರಾವ್‌ಗೂ ನೋಟಿಸ್ ನೀಡಲಾಗಿದೆ.
ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ, ಜಾರಿ ನಿರ್ದೇಶನಾಲಯವು 2021 ರಲ್ಲಿ ಜಮೀರ್ ಅಹಮದ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ದಾಳಿ ನಡೆಸಿತ್ತು. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು.
ಜನಪ್ರತಿನಿಧಿಯಾಗಿರುವ ಜಮೀರ್ ಅಹಮದ್ ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ್ದು, ತನಿಖೆ ನಡೆಸುವಂತೆ ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಕೇಸ್ ವರ್ಗಾಯಿಸಿತ್ತು.
ಈ ನಿಟ್ಟಿನಲ್ಲಿ, ಜಮೀರ್ ವಿರುದ್ಧ ಎಸಿಬಿ ತನಿಖೆ ನಡೆಸಿ, ಅವರು ಆದಾಯಕ್ಕಿಂತ ಸುಮಾರು 87 ಕೋಟಿ ರೂ. ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. 2022ರಲ್ಲಿ ಹೈಕೋರ್ಟ್ ಎಸಿಬಿ ರದ್ದುಗೊಳಿಸಿದ ಬಳಿಕ, ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದಾರೆ.
Silent protest ಹುಲಿ ವೇಷಧಾರಿಯ ಹೊಟ್ಟೆ ಮೇಲೆ ಸೌಜನ್ಯಾ ಚಿತ್ರ… ಗಮನಸೆಳೆಯುತ್ತಿದೆ ಮೌನದ ಹಕ್ಕೊತ್ತಾಯ
ಕಾರು – ಟ್ರಕ್ ಡಿಕ್ಕಿ : ಬೆಂಕಿ ತಗುಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನ, ವೀಡಿಯೋ ವೈರಲ್