newsics.com
ನವದೆಹಲಿ: 2026ರ ಡಿಸೆಂಬರ್ನಿಂದ ವಿಮಾನ ನಿಲ್ದಾಣಗಳಂತೆ ಕೇವಲ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಟರ್ಮಿನಲ್ ಪ್ರದೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ರೈಲು ಟಿಕೆಟ್ಟೇ ಬೋರ್ಡಿಂಗ್ ಪಾಸ್ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಪ್ರಯಾಣಿಕರಲ್ಲದವರು ನಿಲ್ದಾಣ ಪ್ರವೇಶಿಸಲು ವಿಸಿಟರ್ ಪಾಸ್ ಮಾದರಿಯಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ಪಡೆಯಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ಹೇಳಿದೆ.
ಅಲ್ಲದೆ, ವಿಮಾನ ನಿಲ್ದಾಣಗಳಲ್ಲಿನ ಲಗೇಜ್ ನಿಯಮಗಳನ್ನೇ ರೈಲ್ವೆ ನಿಲ್ದಾಣಗಳಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಭಾರತೀಯ ರೈಲ್ವೆ ಮುಂದಾಗಿದೆ.
ಈ ಹೊಸ ವ್ಯವಸ್ಥೆಯ ಅಡಿಯಲ್ಲಿ, ಆಯ್ದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಲಗೇಜ್ಗಳನ್ನು ಕಡ್ಡಾಯವಾಗಿ ತೂಕ ಮಾಡಲಾಗುತ್ತದೆ. ಮತ್ತು ಒಂದೊಮ್ಮೆ ಲಗೇಜ್ ನಿಗದಿತ ಮಿತಿಗಿಂತ ಹೆಚ್ಚು ತೂಕ ಅಥವಾ ಗಾತ್ರವನ್ನು ಹೊಂದಿದ್ದರೆ ಬ್ಯಾಗ್ಗಳಿಗೆ ದಂಡವನ್ನು ವಿಧಿಸಲಾಗುತ್ತದೆ.
ಎಸಿ ಫಸ್ಟ್ ಕ್ಲಾಸ್: 70 ಕೆ.ಜಿ.
ಎಸಿ ಟೂ ಟೈಯರ್: 50 ಕೆ.ಜಿ.
ಎಸಿ ಥ್ರೀ ಟೈಯರ್ ಮತ್ತು ಸ್ಲೀಪರ್ ಕ್ಲಾಸ್: 40 ಕೆ.ಜಿ.
ಜನರಲ್ (ಸಾಮಾನ್ಯ) ದರ್ಜೆ: 35 ಕೆ.ಜಿ.
ಒಂದು ವೇಳೆ ಲಗೇಜ್ ನಿಗದಿತ ತೂಕದ ಮಿತಿಯೊಳಗೆ ಇದ್ದೂ, ಒಂದೊಮ್ಮೆ ಅದರ ಗಾತ್ರವು ತುಂಬಾ ದೊಡ್ಡದಾಗಿದ್ದರೆ, ಇದು ಇತರ ಪ್ರಯಾಣಿಕರಿಗೆ ಅನಾನುಕೂಲ ಉಂಟುಮಾಡುತ್ತಿದ್ದರೆ ಅಂತಹ ಬ್ಯಾಗೇಜ್ಗಳಿಗೂ ದಂಡ ವಿಧಿಸಲಾಗುತ್ತದೆ.
ಈ ನಿಯಮವನ್ನು ಮೊದಲ ಹಂತದಲ್ಲಿ ಉತ್ತರ ಮಧ್ಯ ರೈಲ್ವೆ (ಎನ್ಸಿಆರ್) ವಲಯದ ಪ್ರಮುಖ ನಿಲ್ದಾಣಗಳಲ್ಲಿ ಜಾರಿಗೆ ತರಲಾಗುತ್ತಿದೆ. ಪ್ರಯಾಗರಾಜ್ ಜಂಕ್ಷನ್, ಕಾನ್ಪುರ್ ಸೆಂಟ್ರಲ್, ಪ್ರಯಾಗರಾಜ್ ಛೆಯೋಕಿ, ಮೀರ್ಜಾಪುರ, ಅಲಿಗಢ ಜಂಕ್ಷನ್ ಮತ್ತು ಇಟಾವಾ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ಲಗೇಜ್ಗಳನ್ನು ತೂಕ ಮಾಡಿದ ನಂತರವೇ ಪ್ಲಾಟ್ಫಾರ್ಮ್ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.
ಅಮೃತ್ ಭಾರತ್ ನಿಲ್ದಾಣ ಯೋಜನೆಯ ಅಡಿಯಲ್ಲಿ ಸುಮಾರು 960 ಕೋಟಿ ರೂ. ವೆಚ್ಚದಲ್ಲಿ ಪ್ರಯಾಗರಾಜ್ ಜಂಕ್ಷನ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗುತ್ತಿದೆ. ಇಲ್ಲಿ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳು, ವಿಶಾಲವಾದ ವಿಶ್ರಾಂತಿ ಕೊಠಡಿಗಳು, ಹೈ ಸ್ಪೀಡ್ ವೈ-ಫೈ, ಪ್ರೀಮಿಯಂ ಬ್ರಾಂಡ್ಗಳ ಮಳಿಗೆಗಳು, ಮತ್ತು ಡಿಜಿಟಲ್ ಮಾಹಿತಿ ಪ್ರದರ್ಶಕಗಳನ್ನು ಅಳವಡಿಸಲಾಗುತ್ತಿದೆ.
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
ರಿಲಯನ್ಸ್ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ – ಶೇ 20 ರಷ್ಟು ಬೆಲೆ ಏರಿಕೆ