newsics.com
ಕಾನ್ಪುರ: ವ್ಯಕ್ತಿಯೊಬ್ಬ 15 ವರ್ಷಗಳ ದಾಂಪತ್ಯ ಜೀವನ ನಡೆಸಿದ ಬಳಿಕ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ದೇಹತ್‌ನ ರಸೂಲಾಬಾದ್‌ನ ಕೂಲಿ ಕಾರ್ಮಿಕ ಯೋಗೇಶ್ ತಿವಾರಿ ತನ್ನ ಪತ್ನಿ ಸೋನಿಯನ್ನು ಆಕೆಯ ಪ್ರಿಯಕರ ವಿಕಾಸ್ ದ್ವಿವೇದಿಯೊಂದಿಗೆ ಮದುವೆ ಮಾಡಿಸಿದ್ದಾನೆ.
ಯೋಗೇಶ್ ತಿವಾರಿ ಪಂಚಾಯತ್ ಒಪ್ಪಿಗೆ ಪಡೆದು ಬಳಿಕ ಪೊಲೀಸರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ದೇವಾಲಯದಲ್ಲಿ ಅವರಿಬ್ಬರ ಮದುವೆ ಕಾರ್ಯವನ್ನು ನೆರವೇರಿಸಿದ್ದಾನೆ.
ಕಾನ್ಪುರದ 40 ವರ್ಷದ ಯೋಗೇಶ್ 15 ವರ್ಷಗಳ ಹಿಂದೆ ಔರಂಗಪುರ್ ಸಂಭಿಯ ಕೃಪಾ ಶಂಕರ್ ಮಿಶ್ರಾ ಅವರ ಮಗಳಾದ ಸೋನಿಯನ್ನು ವಿವಾಹವಾಗಿದ್ದ. 2010ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಕನ್ನೌಜ್ ನಿವಾಸಿ ವಿಕಾಸ್ ದ್ವಿವೇದಿಯನ್ನು ಪ್ರೀತಿಸುತ್ತಿದ್ದ ಸೋನಿ ಮದುವೆಯ ಬಳಿಕವೂ ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.
ಸೋನಿ ಮತ್ತು ವಿಕಾಸ್ ಅಕ್ರಮ ಸಂಬಂಧದ ಬಗ್ಗೆ ತಿಳಿದ ಯೋಗೇಶ್ ಬಳಿಕ ಸೋನಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಇದರಿಂದ ಸೋನಿ ಮನೆ ಬಿಟ್ಟು ಹೋಗಿದ್ದಳು. ಕೆಲವು ದಿನಗಳ ಬಳಿಕ ಆಕೆ ವಿಕಾಸ್ ಜತೆಗೆ ಗ್ರಾಮಕ್ಕೆ ಹಿಂದುರುಗಿದ್ದಳು. ವಿಕಾಸ್ ಗ್ರಾಮದಲ್ಲಿರುವುದನ್ನು ತಿಳಿದ ಯೋಗೇಶ್ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದ.
ಈ ನಡುವೆ ವಿಕಾಸ್ ಗ್ರಾಮದಿಂದ ಪರಾರಿಯಾಗಿದ್ದ. ಆದರೆ ಸೋನಿಯ ಉದ್ದೇಶ ಮತ್ತು ವಿಕಾಸ್ ಮೇಲಿನ ಪ್ರೀತಿಯನ್ನು ಅರಿತ ಯೋಗೇಶ್ ವಿಕಾಸ್ ಮನವೊಲಿಸಿ ಮರಳಿ ಬರುವಂತೆ ಹೇಳಿದ್ದಾನೆ. ಬಳಿಕ ಪಂಚಾಯತ್ ಸಭೆಯಲ್ಲಿ ಸೋನಿಯನ್ನು ವಿಕಾಸ್‌ನೊಂದಿಗೆ ಮದುವೆ ಮಾಡಿಸಲು ಯೋಗೇಶ್ ಲಿಖಿತವಾಗಿ ಒಪ್ಪಿಗೆ ನೀಡಿದ.
ಬಳಿಕ ತಿಸ್ತಿ ಪೊಲೀಸ್ ಠಾಣೆಯ ಬಳಿಯ ದೇವಸ್ಥಾನದಲ್ಲಿ ಸೋನಿ ಮತ್ತು ವಿಕಾಸ್ ವಿವಾಹವನ್ನು ಯೋಗೇಶ್ ನೆರವೇರಿಸಿದ್ದಾನೆ.
ಇದೇ ರೀತಿಯ ಪ್ರಕರಣ ಕಳೆದ ವಾರ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿತ್ತು.