newsics.com
ಕೊಡಗು: ಜಿಲ್ಲೆಯ ಮಡಿಕೇರಿಯ ಕೆಲವು ಭಾಗಗಳಲ್ಲಿ ಬುಧವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ.
ಮನೆಯಲ್ಲಿದ್ದ ಸಾಮಗ್ರಿಗಳು ಹಾಗೂ ಗ್ರಂಥಾಲಯದಲ್ಲಿದ್ದ ವಸ್ತುಗಳು ಅಲುಗಾಡಿದ್ದು, ಜನರು ಭಯಭೀತರಾಗಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡಿನಲ್ಲಿ ಭೂಕಂಪನದ ಅನುಭವ ಆಗಿದೆ. ಜತೆಗೆ, ಜೋಡುಪಾಲ ಮತ್ತು ಮೊಣ್ಣಂಗೇರಿ ಭಾಗದಲ್ಲಿಯೂ ಭೂಕಂಪನದ ಅನುಭವ ಆಗಿದೆ.
ಭೂಮಿ ಜೋರಾಗಿ ಗುಡುಗಿದ ಹಾಗೂ ನಡುಗಿದ ಅನುಭವ ಉಂಟಾಗಿದ್ದು ಮನೆಯಲ್ಲಿದ್ದ ಜನರು ಹೊರಗೆ ಓಡಿಬಂದಿದ್ದಾರೆ. ಈಗಾಗಲೇ ಕೆಲವು ವರ್ಷಗಳ ಹಿಂದೆ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದಿದ್ದು, ಇದೀಗ ಎಲ್ಲಿ ಗುಡ್ಡ ಕುಸಿಯುತ್ತದೆಯೋ, ಭೂಮಿ ಬಿರಿಯುತ್ತದೆಯೋ ಎಂಬ ಭಯದಿಂದಲೇ ಜೀವನ ಸಾಗಿಸುವಂತಾಗಿದೆ ಎಂದು ಜನರು ತಮ್ಮ ಭಯ ಹೇಳಿಕೊಂಡಿದ್ದಾರೆ.
ಮಡಿಕೇರಿ ಸಮೀಪದ ದೇವಸ್ತೂರು ಭಾಗದಲ್ಲೂ ಇದೇ ಅನುಭವ ಆಗಿದೆ. ಮನೆಯಲ್ಲಿನ ವಸ್ತುಗಳು ಅಲ್ಲಾಡಿವೆ ಎಂದು ಜನರು ತಿಳಿಸಿದ್ದಾರೆ. ಈ ಗ್ರಾಮದ ಜನರಿಗೆ 2018ರಲ್ಲೂ ಇದೇ ಅನುಭವ ಅನುಭವ ಆಗಿತ್ತು. ಇದಾದ ನಂತರ ಜಿಲ್ಲೆಯ ಹಲವೆಡೆ ಭೂಕಂಪನದ ಜತೆಗೆ ಭೂ ಕುಸಿತವೂ ಉಂಟಾಗಿತ್ತು ಎಂದು ಜನರು ಅನುಭವ ಹಂಚಿಕೊಂಡಿದ್ದಾರೆ.