newsics.com
ಬೆಂಗಳೂರು: ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ದೇವಸ್ಥಾನ, ಮಠ, ಧಾರ್ಮಿಕ ದತ್ತಿ ಇಲಾಖೆಗೆ ವಿವಿಧ ಯೋಜನೆ, ಅನುದಾನ ನೀಡಿದ್ದಾರೆ. ಜತೆಗೆ ದೇವಸ್ಥಾನ ಆಸ್ತಿ ರಕ್ಷಣೆಗಾಗಿ ಹೊಸ ಕಾರ್ಯಕ್ರಮವನ್ನು ಜಾರಿ ತರಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 25,551 ಧಾರ್ಮಿಕ ಸಂಸ್ಥೆಗಳ/ದೇವಾಲಯಗಳಲ್ಲಿರುವ ಅರ್ಚಕರಿಗೆ ಪ್ರಸ್ತುತ ಪಾವತಿಸುತ್ತಿರುವ ವಾರ್ಷಿಕ ತಸ್ತೀಕ್ ಮೊತ್ತವನ್ನು 60,000 ರೂ.ಗಳಿಂದ 72,000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ಅಲ್ಲದೆ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತಿತರ ಭತ್ಯೆಗಳನ್ನು ಇದುವರೆಗೂ ದೇವಾಲಯಗಳ ನಿಧಿಯಿಂದ ಭರಿಸಲಾಗುತ್ತಿತ್ತು. ಆದರೆ 2025-26 ನೇ ಸಾಲಿನಿಂದ ಇವರುಗಳ ವೇತನವನ್ನು ಸರ್ಕಾರದ ವತಿಯಿಂದ ಪಾವತಿಸಲು ಕ್ರಮವಹಿಸಲಾಗುವುದು ಎಂದಿದ್ದಾರೆ.
ರಾಜ್ಯದ ಪ್ರಮುಖ 400 ದೇವಾಲಯ ಹಾಗೂ ಹೊರ ರಾಜ್ಯಗಳಲ್ಲಿರುವ ರಾಜ್ಯ ಛತ್ರಗಳಲ್ಲಿ ಲಭ್ಯವಿರುವ ಅಂದಾಜು 3,500 ಕೊಠಡಿಗಳಲ್ಲಿ ಯಾತ್ರಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ಕೊಠಡಿಗಳ ಕಾಯ್ದಿರಿಸುವಿಕೆ ಹಾಗೂ ನಿರ್ವಹಣೆ ಮಾಡಲು ʻಕರ್ನಾಟಕ ದೇವಾಲಯಗಳ ವಸತಿ ಕೋಶʼವನ್ನು ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.