newsics.com
ಕೊಡಗು : ಶ್ವಾನಕ್ಕೆ ಈಗ ಎಲ್ಲೆಡೆ ಪಾರೋ ವೈರಲ್ ಸೋಂಕು ತಗುಲುತ್ತಿದ್ದು ಹಲವು ನಾಯಿಗಳು ಈ ಸೋಂಕಿಗೆ ಬಲಿಯಾಗುತ್ತಿವೆ.
ಕೊಡಗು ಜಿಲ್ಲೆಯಲ್ಲಿ ನೂರಾರು ಶ್ವಾನಗಳಿಗೆ ಪಾರೋ ವೈರಲ್ ಸೋಂಕು ವಿಪರೀತವಾಗಿ ಹರಡುತ್ತಿದೆ. ಈ ಸೋಂಕಿಗೆ ಒಳಗಾದ ಶ್ವಾನಗಳು ಆಹಾರಬಿಟ್ಟು ರಕ್ತಬೇಧಿ ಮತ್ತು ರಕ್ತವಾಂತಿಯಿಂದ ನರಳಿ ಬಳಿಕ ನಿತ್ರಾಣಗೊಂಡು ಸಾವನ್ನಪ್ಪುತ್ತಿವೆ.
ಕಳೆದ ಹದಿನೈದು ದಿನಗಳಲ್ಲಿಯೇ ಈ ಸೋಂಕಿಗೆ ತುತ್ತಾಗಿ 50 ಕ್ಕೂ ಹೆಚ್ಚು ಸಾಕುಶ್ವಾನಗಳು ಸಾವನ್ನಪ್ಪಿವೆ. ಇನ್ನು ಬೀದಿ ನಾಯಿಗಳು ಕೂಡ ಸೋಂಕಿನಿಂದ ಬಳಸಿ ಸಾವನ್ನಪ್ಪುತ್ತಿದ್ದು, ಅದರ ಲೆಕ್ಕ ದೊರೆತ್ತಿಲ್ಲ. ಜಿಲ್ಲೆಯ ಎಲ್ಲಾ ಪಶು ಆಸ್ಪತ್ರೆಗಳಿಗೆ ನಿತ್ಯ 20 ರಿಂದ 25 ನಾಯಿಗಳು ಈ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ಬರುತ್ತಿವೆ. ವಿಪರ್ಯಾಸವೆಂದರೆ ಪಶು ವೈದ್ಯ ಆಸ್ಪತ್ರೆಯಲ್ಲಿ ಅಗತ್ಯದಷ್ಟು ವೈದ್ಯರೇ ಇಲ್ಲದೆ ಶ್ವಾನ ಪ್ರಿಯರು ಚಿಕಿತ್ಸೆಗೆ ಪರದಾಡಬೇಕಾಗಿದೆ. ಇರುವ ವೈದ್ಯರೇ ದಿನವಿಡೀ ಬಿಡುವಿಲ್ಲದೆ ಶ್ವಾನಗಳಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಯಾವುದೇ ಒಂದು ಶ್ವಾನಕ್ಕೆ ಈ ಸೋಂಕು ಬಂತೆಂದರೆ ಅದರ ಸಂಪರ್ಕಕ್ಕೆ ಬಂದ ಶ್ವಾನ ಅಥವಾ ಸೋಂಕಿತ ಶ್ವಾನ ಓಡಾಡಿದ ಜಾಗಗಳಲ್ಲಿ ಆರೋಗ್ಯಯುತ ಶ್ವಾನ ಓಡಾಡಿದರೆ ಅವುಗಳಿಗೂ ಸೋಂಕು ಹರಡುತ್ತದೆ.
ಸೋಂಕು ಬಂದ ಎರಡನೇ ದಿನದಿಂದಲೇ ಶ್ವಾನ ಆಹಾರ ತ್ಯಜಿಸುತ್ತದೆ. ಬಳಿಕ ನಾಲ್ಕನೇ ದಿನದಿಂದ ರಕ್ತಮಿಶ್ರಿತ ಬೇಧಿ ಮತ್ತು ವಾಂತಿ ಮಾಡಿಕೊಳ್ಳಲಾರಂಭಿಸುತ್ತದೆ. ಒಮ್ಮೆ ರಕ್ತಬೇಧಿ ಮತ್ತು ವಾಂತಿ ಮಾಡಿಕೊಳ್ಳಲು ಆರಂಭಿಸಿದವೆಂದರೆ ಅವುಗಳನ್ನು ಬದುಕಿಸುವುದು ಕಷ್ಟ. ಆದರೆ ನಿರಂತರ ಐದರಿಂದ ಆರು ದಿನಗಳ ಕಾಲ ಚಿಕಿತ್ಸೆ ನೀಡಿದರೆ ಬದುಕುವ ಸಾಧ್ಯತೆ ಶೇ 80 ರಷ್ಟು ಇರುತ್ತದೆ ಎನ್ನುತ್ತಾರೆ ವೈದ್ಯರು. ಆದರೆ ಒಂದೋ ಎರಡು ದಿನಗಳು ಮಾತ್ರವೇ ಚಿಕಿತ್ಸೆ ಕೊಡಿಸಿ ಸುಮ್ಮನಾದರೆ ಸಂಪೂರ್ಣ ಗುಣಮುಖವಾಗುವುದಿಲ್ಲ. ತಾತ್ಕಾಲಿಕವಾಗಿ ಸ್ವಲ್ಪ ಚೇತರಿಸಿಕೊಂಡಂತೆ ಕಂಡು ಮತ್ತೆ ರೋಗ ಉಲ್ಭಣಗೊಂಡು ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ.