newsics.com
ಬೆಂಗಳೂರು: ಬಿಎಂಟಿಸಿ ಬಸ್ಸಿಗೆ ಹತ್ತಿದ್ದ ಶಾಲಾ ಬಾಲಕನೊಬ್ಬನಿಗೆ ಆ ಬಸ್ಸಿನ ಕಂಡಕ್ಟರ್ ಒಬ್ಬರು ಕಾಲಿನಿಂದ ಒದ್ದಿರುವ ಘಟನೆ ಬೆಂಗಳೂರಿನ ಚಿಕ್ಕಬಿದರಕಲ್ಲು ಬಸ್ ಸ್ಟ್ಯಾಂಡಿನಲ್ಲಿ ನಡೆದಿದೆ. ಸದ್ಯ ಈ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ.
ಘಟನೆಯ ಪೂರ್ವಾಪರ ತಿಳಿದಿಲ್ಲ. ಆದರೆ, ಚೇತನ್ ಸೂರ್ಯ ಎಂಬುವರ ಟ್ವಿಟರ್ ಖಾತೆ ಸೇರಿ ಕೆಲವು ಇನ್ಸ್ಟಾ ಗ್ರಾಂ ಖಾತೆಗಳಲ್ಲಿ ಈ ಕುರಿತಾದ ವಿಡಿಯೋಗಳು ಪ್ರಕಟಗೊಂಡಿವೆ. ಅವುಗಳಲ್ಲಿರುವ ದೃಶ್ಯಾವಳಿಗಳ ಪ್ರಕಾರ, ಹುಡುಗನೊಬ್ಬ ಶಾಲಾ ಬಸ್ಸು ಹತ್ತಿದ್ದಾನೆ. ಅಲ್ಲಿ ಕಂಡಕ್ಟರ್ ಹಾಗೂ ಹುಡುಗನ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದಿದೆ.
ವಾದ – ವಿವಾದದ ನಡುವೆ ಕಂಡಕ್ಟರ್ ತನ್ನ ಕಾಲಿನಿಂದ ಆ ಹುಡುಗನಿಗೆ ಒದ್ದಿದ್ದಲ್ಲದೆ ಥಳಿಸಿದ್ದಾರೆ ಎಂಬುದು ಹುಡುಗ ಹಾಗೂ ಸಹ ಪ್ರಯಾಣಿಕರ ಆರೋಪ. ಆದರೆ, ಅವರ ಮಾತನ್ನು ಕಂಡಕ್ಟರ್ ಒಪ್ಪುವುದಿಲ್ಲ. ನಾನು ಮೊಣಕಾಲಿನಲ್ಲಿ ಮಾತ್ರ ಹುಡುಗನನ್ನು ತಳ್ಳಿದ್ದು, ಅದನ್ನು ಕಾಲಿನಿಂದ ಝಾಡಿಸಿ ಒದೆಯಲಾಗಿದೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳುತ್ತಾರೆ.