newsics.com
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಡಾದಲ್ಲಿ ಸೈಟ್ಗಳ ಹಂಚಿಕೆಯ ಪರಿಹಾರಾರ್ಥ ಹಣ ಅಕ್ರಮ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತನ್ನ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಉಲ್ಲೇಖಿಸಿದೆ.
ಹಣ ಅಕ್ರಮ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು 102 ಪುಟಗಳ ಇಡಿಯ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.
ಮುಡಾ ಜಮೀನನನ್ನು 3,24,700 ರೂ. ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತ್ತು. ತಪ್ಪು ಮಾಹಿತಿ, ಪ್ರಭಾವ ಆಧರಿಸಿ ಕಾನೂನುಬಾಹಿರ ಡಿನೋಟಿಫಿಕೇಷನ್ ಮಾಡಲಾಗಿದೆ. ಬಿ.ಎಂ.ಮಲ್ಲಿಕಾರ್ಜುನಸ್ವಾಮಿ ಇದನ್ನು ಕೃಷಿ ಜಮೀನೆಂದು ಖರೀದಿಸಿದ್ದಾರೆ.
ಬಿಎಂ ಮಲ್ಲಿಕಾರ್ಜುನಸ್ವಾಮಿ ಕೃಷಿ ಜಮೀನು ಎಂದು ಖರೀದಿ ಮಾಡುವ ಮೊದಲೇ ಮುಡಾ ಇಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿತ್ತು. ನಿವೇಶನ ಹಂಚಿಕೆ ಮಾಡಿತ್ತು. ಇದಕ್ಕೆ ಯಾವ ತಕರಾರನ್ನೂ ಎತ್ತಿಲ್ಲ. ತಪ್ಪು ಸ್ಥಳ ಪರಿಶೀಲನೆ ವರದಿ ಆಧರಿಸಿ ಭೂಮಿ ಪರಿವರ್ತನೆ ಮಾಡಲಾಗಿದೆ ಎಂದು ಇಡಿ ಹೇಳಿದೆ.
14 ನಿವೇಶನ ಹಂಚಿಕೆಯಾದಾಗ ಯತೀಂದ್ರ ವರುಣ ಶಾಸಕರಾಗಿದ್ದರು. ಅದೇ ಸಮಯದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸದಸ್ಯರಾಗಿದ್ದರು. ಅಕ್ರಮ ನಿವೇಶನ ಹಂಚಿಕೆಯಾದಾಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಎಸ್ ಜಿ ದಿನೇಶ್ ಕುಮಾರ್ ಸಿದ್ದರಾಮಯ್ಯ ಅವರ ಸಹಾಯಕರಾನಾಗಿದ್ದರು. ಅಲ್ಲದೇ ಸಿಟಿ ಕುಮಾರ್ ಮುಡಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದರು. ಸಹಿ ನಕಲು ಮಾಡಿ ಸೈಟ್ ಹಂಚಿಕೆ ಆಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜಕೀಯ ಪ್ರಭಾವ ಬಳಸಿ ಮುಡಾ ಸೈಟ್ ಗಳನ್ನು ಪಡೆದುಕೊಳ್ಳಲಾಗಿದೆ. 56 ಕೋಟಿ ಮೌಲ್ಯದ ಸೈಟ್ಗಳನ್ನು ಪರಿಹಾರವಾಗಿ ಪಡೆದುಕೊಳ್ಳಲಾಗಿದೆ. ಕಾನೂನುಬಾಹಿರವಾಗಿ ಪಡೆದ ಸೈಟ್ಗಳನ್ನು ಪರಿಹಾರವೆಂದು ಬಿಂಬಿಸಲಾಗಿದೆ.
ಹಿಂದಿನ ಮುಡಾ ಆಯುಕ್ತ ನಟೇಶ್ ಶಾಮೀಲಾಗಿ ಈ ಪ್ರಕ್ರಿಯೆ ನಡೆಸಲಾಗಿದೆ. PMLA ಅಡಿ ತನಿಖೆ ಆರಂಭಿಸಿದ ನಂತರ 2024ರ ಅಕ್ಟೋಬರ್ 1ರಂದು ಪಾರ್ವತಿ 14 ಸೈಟ್ ಹಿಂತಿರುಗಿಸಿದ್ದಾರೆ. ಸೈಟ್ ಹಿಂತಿರುಗಿಸಿದ್ದರೂ ಅಕ್ರಮ ಹಣ ವರ್ಗಾವಣೆಯ ಯತ್ನ ಪತ್ತೆಯಾಗಿದೆ ಎಂದು ಇಡಿ ಹೇಳಿದೆ.
ಸಿದ್ದರಾಮಯ್ಯ, ಬಿ.ಎಂ.ಪಾರ್ವತಿ, ಬಿ.ಎಂ.ಮಲ್ಲಿಕಾರ್ಜುನಸ್ವಾಮಿ, ದೇವರಾಜು ಮುಡಾ ಅಧಿಕಾರಿಗಳು, ವ್ಯವಹಾರಸ್ಥರು, ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೇವಲ ಪಾರ್ವತಿಯವರ ಕೇಸ್ನಲ್ಲಿ ಮಾತ್ರವಲ್ಲ. ಸುಮಾರು 1,095 ಮುಡಾ ಸೈಟ್ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯದ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಉಲ್ಲೇಖವಾಗಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದು 13.5.2013 ರಂದು. ಪತ್ನಿ ಅರ್ಜಿ ಸಲ್ಲಿಸಿದ್ದು 14.6.2014 ರಂದು. ಪತ್ರದಲ್ಲಿನ ಒಂದು ಸಾಲು ಅಳಿಸಲಾಗಿದೆ. ಇದು ದಾಖಲೆ ತಿರುಚಿದ್ದಕ್ಕೆ ಸಾಕ್ಷಿಯಾಗಿದೆ ಎಂದು ಇಡಿ ಉಲ್ಲೇಖಿಸಿದೆ.
ಜಮೀನು ಖರೀದಿಸಿದ 10 ವರ್ಷಗಳ ಬಳಿಕ ಸಿದ್ದರಾಮಯ್ಯ ಸಿಎಂ ಆದಾಗ ಪಾರ್ವತಿ ಅರ್ಜಿ ಸಲ್ಲಿಸಿದ್ದು, ಭೂಸ್ವಾಧೀನ ಮಾಡಿಕೊಳ್ಳದೆ ತಮ್ಮ ಜಮೀನು ಮುಡಾ ಬಳಸಿದೆ ಎಂದು ಸಿಎಂ ಪತ್ನಿ ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ. ಆದರೆ ಆಗ ಜಮೀನು ಮುಡಾ ಸ್ವಾಧೀನದಲ್ಲೇ ಇತ್ತೇ ಹೊರತು ಇವರ ಸ್ವಾಧೀನದಲ್ಲಿರಲಿಲ್ಲ.
ಹರಾಜಿನಲ್ಲಿ ಮಾರಾಟವಾಗಬೇಕಿದ್ದ ಕಮರ್ಷಿಯಲ್ ಸೈಟ್ ಗಳನ್ನೇ ಸಿಎಂ ಪತ್ನಿಗೆ ನೀಡಲಾಗಿತ್ತು. ಪರಿಹಾರದ ಸೈಟ್ ಪಡೆಯಲು ಸಿಎಂ ಪತ್ನಿ ಸಾಮಾನ್ಯ ಪ್ರಕ್ರಿಯೆ ಅನುಸರಿಸಿರಲಿಲ್ಲ. ಸಿಎಂ ಪತ್ನಿ ನಷ್ಟ ಭರ್ತಿ ಬಾಂಡ್ ಪೇಪರ್ ಖರೀದಿಸಿದ್ದು, 2021ರ ನವೆಂಬರ್ 24 ರಂದು. ಆದರೆ ಖರೀದಿಗೆ ಮೊದಲೇ ನವೆಂಬರ್ 23 ರಂದು ಸಹಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ರಾಜಕೀಯ ಒತ್ತಡದಿಂದ ಸಿಎಂ ಪತ್ನಿಗೆ ಅನುಕೂಲ ಮಾಡಿಕೊಡಲು ದಾಖಲೆಗಳನ್ನು ತಿರುಚಲಾಗಿದೆ ಎಂದು ಇಡಿ ಹೇಳಿದೆ.
ಸಿಎಂ ಪತ್ನಿಗೆ 1991 ರ ನಿಯಮಾವಳಿಯಲ್ಲಿ ಸೈಟ್ ಹಂಚಿಕೆ ಮಾಡಲಾಗಿದೆ. ಆಗ 50: 50 ನಿಯಮವಿರಲಿಲ್ಲ. ಸಿದ್ದರಾಮಯ್ಯ ಆಪ್ತ ಸಹಾಯಕ ಸಿಟಿ ಕುಮಾರ್ ಅಲಿಯಾಸ್ ಎಸ್.ಜಿ.ದಿನೇಶ್ ಕುಮಾರ್ ಪ್ರಭಾವ ಬಳಕೆ ಮಾಡಲಾಗಿದೆ. ಸಿಎಂ ಪತ್ನಿ ಪರವಾಗಿ ಸಿ.ಟಿ.ಕುಮಾರ್ ಮುಡಾ ಕಚೇರಿಗೆ ಬಂದು ಪರಿಹಾರದ ಸೈಟ್ ಗಳ ಬಗ್ಗೆ ಚರ್ಚಿಸಿದ್ದರು.
ಮುಡಾ ಆಯುಕ್ತರ ಪಿಎ ಜತೆ ಸಿ.ಟಿ.ಕುಮಾರ್ ನಿರಂತರ ಸಂಪರ್ಕದಲ್ಲಿದ್ದರು. ಮುಡಾ ಆಯುಕ್ತರು ನಗರಾಭಿವೃದ್ದಿ ಇಲಾಖೆಗೆ ನೀಡಬೇಕಿದ್ದ ಕರಡು ಪತ್ರ ಸಿ.ಟಿ.ಕುಮಾರ್ ಬಳಿ ಪತ್ತೆಯಾಗಿತ್ತು. ಸಿ.ಟಿ.ಕುಮಾರ್ ವಾಟ್ಸ್ ಆಪ್ ಮೆಸೇಜ್ ನಲ್ಲಿ ಪತ್ರ ಪತ್ತೆಯಾಗಿರುವುದು ಈತ ಪ್ರಭಾವಿ ಎಂಬುದಕ್ಕೆ ಸಾಕ್ಷಿ ಎಂದು ಇಡಿ ಆದೇಶದಲ್ಲಿ ಸ್ಫೋಟಕ ಮಾಹಿತಿ ಉಲ್ಲೇಖಿಸಲಾಗಿದೆ.