newsics.com
ಮೈಸೂರು: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಚೆನ್ನೈ ಎಕ್ಸ್‌ಪ್ರೆಸ್ ರೈಲು ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದು ಮೈಸೂರಿನ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಕಾರ್ಯದರ್ಶಿಯೂ ಆದ ಹಿರಿಯ ವಕೀಲ ಉಮೇಶ್ ಪುತ್ರಿ ಶ್ರೇಯ(19) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಈಕೆ ಮೈಸೂರಿನ ಮಾತಾ ಅಮೃತಾನಂದಮಯಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದರು.
ಕಾಲೇಜಿನ ಸಾಂಸ್ಕೃತಿಕ ತಂಡದೊಂದಿಗೆ ಚೆನ್ನೈನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಮೈಸೂರಿನಿಂದ ಬುಧವಾರ ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ತೆರಳುತ್ತಿದ್ದರು.
ರೈಲು ಬೆಂಗಳೂರು ನಿಲ್ದಾಣದಲ್ಲಿ ನಿಂತಿದ್ದ ವೇಳೆ ನೀರಿನ ಬಾಟಲಿ ಖರೀದಿಸಲು ಕೆಳಗಿಳಿದ ಶ್ರೇಯ, ಮತ್ತೆ ರೈಲು ಹತ್ತುವ ವೇಳೆ ಆಯತಪ್ಪಿ ಪ್ಲಾಟ್ ಫಾರ್ಮನಲ್ಲಿ ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದ ಶ್ರೇಯಾಳನ್ನು ಗಮನಿಸಿದ ಸಹಪಾಠಿಗಳು ತಕ್ಷಣವೇ ರೈಲಿನಿಂದ ಇಳಿದು ಆಕೆಯ ಆರೈಕೆಯಲ್ಲಿ ತೊಡಗಿದ್ದರಾದರೂ ಅಷ್ಟರಲ್ಲಿ ಶ್ರೇಯ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಬೆಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ; ವಿಧಾನಸೌಧ ಮುಂದೆ ಕೂಗಾಡಿದ ರೇಶ್ಮಾ