newsics.com
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನಿಂದಿಸಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಸಿ.ಟಿ ರವಿ ಬಂಧನ ಖಂಡಿಸಿ ಡಿ. 20ರಂದು ಚಿಕ್ಕಮಗಳೂರು ನಗರ ಬಂದ್‌ಗೆ ನಗರ ಬಿಜೆಪಿ ಕರೆ ಕೊಟ್ಟಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ಗೆ ಕರೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೂರಾರು ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಸ್ಥಳದಲ್ಲಿ 6 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ನಿನ್ನೆ ಸಂಜೆ ಸಿ.ಟಿ ರವಿ ಅವರನ್ನು ಬಂಧಿಸಿರುವ ಪೊಲೀಸರು ರಾತ್ರಿಯಿಡೀ ಜಿಲ್ಲೆಯನ್ನ ಸುತ್ತಾಡಿಸಿದ್ದಾರೆ. ಇದರಿಂದ ತಮಗೆ ಮಾನಸಿಕ ಹಿಂಸೆ ನೀಡಿದ್ದಾರೆಂದು ಸಿ.ಟಿ ರವಿ ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಧಾರವಾಡ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಯರಗಟ್ಟಿ ಮೂಲಕ ಮತ್ತೆ ಬೆಳಗಾವಿಯತ್ತ ಕರೆತಂದಿದ್ದಾರೆ. ಸಿ.ಟಿ ರವಿಗೆ ಉಪಹಾರ, ಕಾಫಿ, ಟೀ ವ್ಯವಸ್ಥೆ ಮಾಡಿಕೊಟ್ಟ ಪೊಲೀಸರು ರಾತ್ರಿಯಿಡೀ ಜಾಗರಣೆ ಮಾಡಿಸಿದ್ದಾರೆ. ಇಂದು ಬೆಳಗ್ಗೆ ಯರಗಟ್ಟಿ ಬಳಿಯ ಡಾಬಾದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.