newsics.com
ಛತ್ತೀಸ್ಗಢ: ಮದ್ಯ ಸೇವಿಸಲು ಪತ್ನಿ 500 ರೂ. ನೀಡದ್ದಕ್ಕೆ ಪತಿಯೊಬ್ಬ ಟವರ್ ಮೇಲೆ ಏರಿ ಜೋರಾಗಿ ಕೂಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಛತ್ತೀಸ್ಗಢದ ಕೊರ್ಬಾದಲ್ಲಿ ನಡೆದಿದೆ.
ಕರಣ್ (26) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ. ಕರಣ್ ಮದ್ಯ ಸೇವಿಸಲು ಪತ್ನಿ ಬಳಿ 500 ರೂಪಾಯಿ ನೀಡುವಂತೆ ಕೇಳಿದ್ದ. ಈ ವೇಳೆ ಪತ್ನಿ ನಿರಾಕರಿಸಿದ್ದಾರೆ. ಇದರಿಂದಾಗಿ ಕರಣ್ ಪತ್ನಿಯನ್ನು ಹೆದರಿಸಲು ಹೈಟೆನ್ಷನ್ ಟವರ್ನಲ್ಲಿ ಸುಮಾರು 60 ಅಡಿ ಮೇಲಕ್ಕೆ ಏರಿ ಕುಳಿತಿದ್ದಾನೆ.
ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಗೊಂದಲ ಉಂಟಾಯಿತು. ಸುದ್ದಿ ತಿಳಿದ ತಾಯಿ ಘಟನಾ ಸ್ಥಳಕ್ಕೆ ಧಾವಿಸಿ ಕೆಳಗಿಳಿಯುವಂತೆ ಮನವಿ ಮಾಡಿದರು. ಆದರೆ, ಆತ ಇನ್ನೂ ಎತ್ತರಕ್ಕೆ ಏರಿದ್ದಾನೆ. ಕೂಡಲೇ ಸ್ಥಳೀಯರು ಮಾಣಿಕಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೂ ಒಂದು ಗಂಟೆಯ ನಂತರ ಪೊಲೀಸರು ಆತನನ್ನು ಕೆಳಗೆ ಬರಲು ಯಶಸ್ವಿಯಾಗಿ ಮನವೊಲಿಸಿದ್ದಾರೆ.