newsics.com
ಬೆಂಗಳೂರು: ಉಪ ಚುನಾವಣೆ ಮುಗಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಈ ಮೂಲಕ ಆಡಳಿತಕ್ಕೆ ಚುರುಕು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಅಲ್ಲದೆ, ಆಡಳಿತ ಯಂತ್ರದಲ್ಲೂ ಭಾರೀ ಬದಲಾವಣೆ ತರುವ ಸಾಧ್ಯತೆಗಳಿವೆ.
ಮೂಲಗಳ ಪ್ರಕಾರ, ಪ್ರಸ್ತುತ ಸಚಿವ ಸಂಪುಟದಲ್ಲಿ ನಿಷ್ಕ್ರಿಯರಾಗಿರುವ ಹಾಗೂ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವ ಆರೇಳು ಸಚಿವರನ್ನು ಬದಲಾಯಿಸಿ, ಆ ಸ್ಥಾನಕ್ಕೆ ಅರ್ಹರನ್ನು ತರುವ ಚಿಂತನೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ ಎನ್ನಲಾಗಿದೆ.
ಯಾರೆಲ್ಲ ಹೊರಕ್ಕೆ?:
ಹಾಲಿ ಸಂಪುಟದಲ್ಲಿ ತೀವ್ರ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ನಿಷ್ಕ್ರಿಯರಾಗಿದ್ದಾರೆ ಎನ್ನಲಾದ ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಎನ್. ರಾಜಣ್ಣ, ಬೋಸರಾಜು ಮೊದಲಾದ ಆರೇಳು ಸಚಿವರಿಗೆ ಕೊಕ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಪಟ್ಟಿಯಲ್ಲಿ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸದ, ಭ್ರಷ್ಟಾಚಾರದ ಆರೋಪಗಳಿರುವ, ವಿವಾದಾತ್ಮಕ ಹೇಳಿಕೆ ನೀಡುತ್ತಾ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಕುಂದುವಂತೆ ಮಾಡಿದ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸಂಪುಟಕ್ಕೆ ಸೇರಿಸಲು ಮುಹೂರ್ತ ನಿಗದಿ ಮಾಡಲಾಗಿದೆ.
ಸಂಪುಟ ಪುನಾರಚನೆಗೂ ಮುನ್ನ ವಾಲ್ಮೀಕಿ ಹಗರಣದಿಂದ ಬಿ. ನಾಗೇಂದ್ರ ದೋಷಮುಕ್ತರಾದರೆ ವಾಪಸು ಸಚಿವ ಸಂಪುಟ ಸೇರುವ ಲಕ್ಷಣಗಳಿವೆ. ಹೊಸಬರಿಗೆ ಮಣೆ ಹಾಕಲು ಹೈಕಮಾಂಡ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಭಾರೀ ಆಡಳಿತಾತ್ಮಕ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ. ಮುಖ್ಯವಾಗಿ ಮುಖ್ಯಮಂತ್ರಿ ಕಚೇರಿಯ ಅಧಿಕಾರಿ ವರ್ಗವನ್ನು ಬದಲಾಯಿಸುವ ಚಿಂತನೆ ಮುಖ್ಯಮಂತ್ರಿಯವರಿಗೆ ಇದೆ ಎಂದು ಹೇಳಲಾಗಿದೆ.
ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ
ಈ ಮಧ್ಯೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡು ಜೈಲು ಪಾಲಾಗಿದ್ದ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.
ಮೈಸೂರಿನ ಎಚ್.ಡಿ.ಕೋಟೆಯ ಕಾರ್ಯಕ್ರಮದಲ್ಲಿ ಮುಖಂಡರು, ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅನಿಲ್ ಚಿಕ್ಕಮಾದುಗೆ ಸ್ಥಾನ ಕೊಡಲು ಸಾಧ್ಯವಿಲ್ಲ. ಸುಮ್ಮನೆ ಸುಳ್ಳು ಹೇಳಲ್ಲ. ಆದರೆ, ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಡಬೇಕು, ಕೊಡ್ತೀನಿ ಎಂದರು.
ನ. 15ರಿಂದ ಕಡಲೆಕಾಯಿ ಪರಿಷೆ, 8 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ
ಮುಂದಿನ ಐದು ದಿನಗಳ ಕಾಲ ಭಾರೀ ಮಳೆ!; ಕರ್ನಾಟಕದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ರಾಜ್ಯದ 3 ಕ್ಷೇತ್ರಗಳಿಗಿಂದು ಉಪ ಚುನಾವಣೆ: 45 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಇದೇ ರೊಮ್ಯಾನ್ಸ್‌ಗೆ ಅತ್ಯುತ್ತಮ ಸಮಯ… ಈ ವೇಳೆ ಭಯವಿಲ್ಲದೆ ನೀವು ‘ಒಂದಾಗಬಹುದು’!